
ನವದೆಹಲಿ, 21 ಆಗಸ್ಟ್ (ಹಿ.ಸ.):
ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ ಎಂದಿನಂತೆ ‘ಸುಭಾಷಿತದ’ ಮೂಲಕ ಪರೋಪಕಾರದ ಮಹತ್ವ ಸಾರುವ ಸಂಸ್ಕೃತ ಶ್ಲೋಕವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
“ನದಿಗಳ ನಿರಂತರ ಹರಿವು ನಮ್ಮ ಸಾಮರ್ಥ್ಯವನ್ನು ಮಾನವೀಯತೆಯ ಒಳಿತಿಗಾಗಿ ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಕಲಿಸುತ್ತದೆ. ನಿಸ್ವಾರ್ಥ ಸೇವೆ, ಸಮರ್ಪಣೆ ಮತ್ತು ಪರೋಪಕಾರದ ಇದೇ ಮನೋಭಾವ ದೇಶಕ್ಕೆ ಹೊಸ ದಿಕ್ಕನ್ನು ನೀಡುತ್ತದೆ” ಎಂದು ಪ್ರಧಾನಿ ಮೋದಿ ಸಂದೇಶ ನೀಡಿದ್ದಾರೆ.
ಅವರು ಹಂಚಿಕೊಂಡಿರುವ ಸುಭಾಷಿತಂ ಹೀಗಿದೆ:
“ಜೀವನಂ ಸ್ವಂ ಪರಾರ್ಥಾಯ ನಿತ್ಯಂ ಯಚ್ಛತ ಮಾನವಾಃ।
ಇತಿ ಸಂದೇಶಮಾಖ್ಯಾತುಂ ಸಮುದ್ರಂ ಯಾಂತಿ ನಿಮ್ನಗಾಃ॥”
ಈ ಶ್ಲೋಕದ ಮೂಲಕ ಪ್ರಕೃತಿಯಿಂದ ಮಾನವರು ಪರೋಪಕಾರದ ಪಾಠ ಕಲಿಯಬೇಕು ಎಂಬ ಸಂದೇಶ ನೀಡಲಾಗಿದೆ. ಪರ್ವತಗಳಿಂದ ಉಗಮಿಸುವ ನದಿಗಳು ಯಾವುದೇ ಆಯಾಸವಿಲ್ಲದೆ ನಿರಂತರವಾಗಿ ಸಮುದ್ರದತ್ತ ಹರಿಯುತ್ತವೆ. ಅವು ತಮ್ಮ ನೀರನ್ನು ತಾವೇ ಕುಡಿಯದೆ, ದಾರಿಯಲ್ಲಿರುವ ಜೀವಿಗಳ ದಾಹ ನೀಗಿಸುತ್ತವೆ. ಅಲ್ಲದೆ, ಕೃಷಿ ಭೂಮಿಗಳಿಗೆ ನೀರುಣಿಸಿ ಜನಜೀವನಕ್ಕೆ ಆಧಾರವಾಗುತ್ತವೆ.
ನದಿಗಳ ಈ ನಿಸ್ವಾರ್ಥ ಪ್ರಯಾಣವು ಮಾನವಕುಲಕ್ಕೆ ಮೌನ ಸಂದೇಶ ನೀಡುತ್ತದೆ ಎಂಬುದು ಶ್ಲೋಕದ ಸಾರವಾಗಿದೆ. “ನಾವು ನಮ್ಮ ಸರ್ವಸ್ವವನ್ನು ಇತರರಿಗಾಗಿ ಸಮರ್ಪಿಸಿಕೊಂಡು ಅಂತಿಮವಾಗಿ ಸಮುದ್ರದಲ್ಲಿ ಲೀನವಾಗುವಂತೆ, ನೀವು ಮನುಷ್ಯರೂ ನಿಮ್ಮ ಜೀವನವನ್ನು ಕೇವಲ ಸ್ವಾರ್ಥಕ್ಕಾಗಿ ಬಳಸದೆ, ಇತರರ ಒಳಿತಿಗಾಗಿ ಹಾಗೂ ಸೇವೆಗಾಗಿ ಸಮರ್ಪಿಸಬೇಕು” ಎಂಬ ಸಂದೇಶವನ್ನು ನದಿಗಳು ನೀಡುತ್ತಿವೆ ಎಂದು ಪ್ರಧಾನಿ ಮೋದಿ ವಿವರಿಸಿದ್ದಾರೆ.
ನಿಸ್ವಾರ್ಥ ಸೇವೆ, ಸಮರ್ಪಣೆ ಮತ್ತು ಪರೋಪಕಾರದ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದ ಅಭಿವೃದ್ಧಿಯ ಜೊತೆಗೆ ರಾಷ್ಟ್ರದ ಪ್ರಗತಿಗೂ ಹೊಸ ದಿಕ್ಕು ದೊರೆಯುತ್ತದೆ ಎಂಬ ಆಶಯವನ್ನು ಪ್ರಧಾನಿ ತಮ್ಮ ಸಂದೇಶದ ಮೂಲಕ ವ್ಯಕ್ತಪಡಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.