
ನವದೆಹಲಿ, 21 ಆಗಸ್ಟ್ (ಹಿ.ಸ.):
ಆ್ಯಂಕರ್:ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಸೇವಾ ತೀರ್ಥದಲ್ಲಿ ದೇಶದ 20 ಬಾಹ್ಯಾಕಾಶ ಸ್ಟಾರ್ಟ್‌ಅಪ್‌ಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಸಂಸ್ಥಾಪಕರೊಂದಿಗೆ ಸಂವಾದ ನಡೆಸಿದರು. ದೇಶದ ಖಾಸಗಿ ಬಾಹ್ಯಾಕಾಶ ಕಂಪನಿಗಳ ಹೆಚ್ಚುತ್ತಿರುವ ಸಾಮರ್ಥ್ಯ, ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಜಾಗತಿಕವಾಗಿ ಹೆಚ್ಚುತ್ತಿರುವ ಬೇಡಿಕೆ ಹಾಗೂ ಭವಿಷ್ಯದ ಅವಕಾಶಗಳ ಕುರಿತು ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು.
ಪ್ರಧಾನಿ ಕಚೇರಿ ಮಾಹಿತಿ ಪ್ರಕಾರ, ರಾಕೆಟ್ ನಿರ್ಮಾಣ, ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ನೌಕೆ ಹಾಗೂ ಉಡಾವಣಾ ವಾಹನಗಳು, ಉಪಗ್ರಹಗಳು, ಬಾಹ್ಯಾಕಾಶಕ್ಕೆ ಸಂಬಂಧಿಸಿದ ವಿದ್ಯುನ್ಮಾನ ವ್ಯವಸ್ಥೆಗಳು, ನವೀನ ತಂತ್ರಜ್ಞಾನದ ರಾಕೆಟ್ ಎಂಜಿನ್‌ಗಳು, ಬಾಹ್ಯಾಕಾಶ ಮತ್ತು ರಕ್ಷಣಾ ಕ್ಷೇತ್ರದ ಮಾಹಿತಿ ವ್ಯವಸ್ಥೆಗಳು, ಬಾಹ್ಯಾಕಾಶ ತ್ಯಾಜ್ಯ ತೆರವು ಹಾಗೂ ಕೃತಕ ಬುದ್ಧಿಮತ್ತೆ ಆಧಾರಿತ ಸ್ಥಳೀಯ ಹವಾಮಾನ ಮತ್ತು ಹವಾಮಾನ ಬದಲಾವಣೆ ಮಾಹಿತಿ ಒದಗಿಸುವ ತಂತ್ರಜ್ಞಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟಾರ್ಟ್‌ಅಪ್‌ಗಳ ಪ್ರಮುಖರು ಸಂವಾದದಲ್ಲಿ ಭಾಗವಹಿಸಿದ್ದರು.
ಬಾಹ್ಯಾಕಾಶ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳಿಗೆ ಅವಕಾಶ ಕಲ್ಪಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ಟಾರ್ಟ್‌ಅಪ್‌ಗಳ ಪ್ರಮುಖರು ಶ್ಲಾಘಿಸಿದರು. ಈ ನೀತಿಯಿಂದ ಉದ್ಯಮಕ್ಕೆ ಹಲವು ಹೊಸ ಅವಕಾಶಗಳು ಸೃಷ್ಟಿಯಾಗಿವೆ ಎಂದು ಅವರು ಹೇಳಿದರು. ಭಾರತೀಯ ಖಾಸಗಿ ಬಾಹ್ಯಾಕಾಶ ಕಂಪನಿಗಳು ಅಭಿವೃದ್ಧಿಪಡಿಸಿರುವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಹಾಗೂ ಬಳಸಿಕೊಳ್ಳಲು ಹಲವು ದೇಶಗಳ ಕಂಪನಿಗಳು ಆಸಕ್ತಿ ತೋರುತ್ತಿವೆ ಎಂದು ಅವರು ಪ್ರಧಾನಿಗೆ ತಿಳಿಸಿದರು.
ಉದ್ಯಮಿಗಳು ತಮ್ಮ ತಂತ್ರಜ್ಞಾನಗಳಿಗೆ ಹೊಸ ಬಳಕೆಗಳನ್ನು ಕಂಡುಕೊಳ್ಳಬೇಕು ಹಾಗೂ ಸಾಮಾನ್ಯ ಜನರ ಜೀವನವನ್ನು ಸುಲಭಗೊಳಿಸುವ ತಂತ್ರಜ್ಞಾನಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.
ಬಾಹ್ಯಾಕಾಶ ಉದ್ಯಮ ಮತ್ತು ಸಮಾಜದ ಅಭಿವೃದ್ಧಿಗೆ ಸಂಬಂಧಿಸಿದ ಇತರ ಕ್ಷೇತ್ರಗಳ ನಡುವೆ ಸಹಕಾರ ಹೆಚ್ಚಿಸುವ ಅಗತ್ಯವನ್ನೂ ಅವರು ಒತ್ತಿ ಹೇಳಿದರು. ಬಾಹ್ಯಾಕಾಶ ತ್ಯಾಜ್ಯ ತೆರವು ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತಿರುವ ಕಂಪನಿಗಳು ಪರಿಸರ ಸಂಘಟನೆಗಳೊಂದಿಗೆ ಕೈಜೋಡಿಸಬಹುದು. ಕೃಷಿ ಕ್ಷೇತ್ರಕ್ಕಾಗಿ ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಸಂಸ್ಥೆಗಳು ಕೃಷಿ ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರಿ ಇಲಾಖೆಗಳೊಂದಿಗೆ ಸಹಕರಿಸಿ ರೈತರಿಗೆ ಉತ್ತಮ ನಿರ್ಧಾರ ಕೈಗೊಳ್ಳಲು ಮತ್ತು ಉತ್ಪಾದನೆ ಹೆಚ್ಚಿಸಲು ನೆರವಾಗಬಹುದು ಎಂದು ಪ್ರಧಾನಿ ಹೇಳಿದರು.
‘ಜಗತ್ತು ಬಾಹ್ಯಾಕಾಶ ಕ್ಷೇತ್ರದ ಬಗ್ಗೆ ಯೋಚಿಸಿದಾಗ ಭಾರತದತ್ತ ಗಮನ ಹರಿಸುವಂತಹ ವಾತಾವರಣ ನಿರ್ಮಾಣವಾಗಬೇಕು’ ಎಂದು ಪ್ರಧಾನಿ ಮೋದಿ ಹೇಳಿದರು. ಭಾರತದ ಬಾಹ್ಯಾಕಾಶ ಕ್ಷೇತ್ರವು ವಿಶ್ವದ ಪ್ರತಿಭೆಗಳು, ಕಂಪನಿಗಳು ಮತ್ತು ಹೂಡಿಕೆಗಳನ್ನು ಆಕರ್ಷಿಸುವ ಪ್ರಮುಖ ಕೇಂದ್ರವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳೊಂದಿಗೆ ಬಾಹ್ಯಾಕಾಶ ಕ್ಷೇತ್ರದ ಕಂಪನಿಗಳ ಸಹಕಾರವನ್ನು ಮತ್ತಷ್ಟು ಹೆಚ್ಚಿಸುವಂತೆಯೂ ಪ್ರಧಾನಿ ಸಲಹೆ ನೀಡಿದರು. ಇದರಿಂದ ಚಿಕ್ಕ ವಯಸ್ಸಿನಿಂದಲೇ ಮಕ್ಕಳಲ್ಲಿ ಬಾಹ್ಯಾಕಾಶದ ಕುರಿತು ಕುತೂಹಲ ಮತ್ತು ಆಸಕ್ತಿ ಬೆಳೆಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಸಂವಾದದಲ್ಲಿ ಸ್ಕೈರೂಟ್ ಏರೋಸ್ಪೇಸ್, ಅಗ್ನಿಕುಲ್ ಕಾಸ್ಮೋಸ್, ಪಿಕ್ಸೆಲ್, ಧ್ರುವ್ ಸ್ಪೇಸ್, ಗ್ಯಾಲಕ್ಸ್‌ಐ, ಪಿಯರ್‌ಸೈಟ್, ಬೆಲಾಟ್ರಿಕ್ಸ್ ಏರೋಸ್ಪೇಸ್, ದಿಗಂತರಾ, ಸ್ಯಾಟ್‌ಶ್ಯೂರ್, ಸುಹೋರಾ ಟೆಕ್ನಾಲಜೀಸ್, ಮನಸ್ತು ಸ್ಪೇಸ್, ಆಸ್ಟ್ರೋಬೇಸ್, ಟೆಕ್‌ಮೀ2ಸ್ಪೇಸ್, ವ್ಯೋಮಿಕ್, ಕಾಸ್ಮೋಸರ್ವ್ ಸ್ಪೇಸ್, ಆರ್ಬಿಟ್‌ಎಐಡಿ ಏರೋಸ್ಪೇಸ್, ಸ್ಕೈಸರ್ವ್ (ಹೈಸ್ಪೇಸ್), ಸೆರಂಡಿಪಿಟಿ ಸ್ಪೇಸ್, ವಾಸರ್ ಲ್ಯಾಬ್ಸ್ ಮತ್ತು ಮಿಸ್ಟಿಯೋ ಸಂಸ್ಥೆಗಳ ಪ್ರಮುಖರು ಹಾಗೂ ಸಂಸ್ಥಾಪಕರು ಭಾಗವಹಿಸಿದ್ದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.