
ನವದೆಹಲಿ, 21 ಆಗಸ್ಟ್ (ಹಿ.ಸ.):
ಆ್ಯಂಕರ್:ಮುಂಬರುವ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ಸಿಒಪಿ-31ಕ್ಕೂ ಮುನ್ನ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಹವಾಮಾನ ಬದಲಾವಣೆ ಕುರಿತ ಮಹತ್ವದ ಮಾತುಕತೆ ನಡೆಯಿತು.
ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಅವರು ಆಸ್ಟ್ರೇಲಿಯಾದ ಹವಾಮಾನ ಬದಲಾವಣೆ ಹಾಗೂ ಇಂಧನ ಸಚಿವ ಕ್ರಿಸ್ ಬೋವೆನ್ ಅವರೊಂದಿಗೆ ಶುಕ್ರವಾರ ಅಂತರ್ಜಾಲದ ಮೂಲಕ ಸಭೆ ನಡೆಸಿದರು.
ಸಭೆಯಲ್ಲಿ ಹವಾಮಾನ ಬದಲಾವಣೆಯ ಸವಾಲು ಎದುರಿಸಲು ಜಾಗತಿಕ ಸಹಕಾರ, ಪರಿಣಾಮಕಾರಿ ಕ್ರಮಗಳು ಹಾಗೂ ಮುಂಬರುವ ಹವಾಮಾನ ಮಾತುಕತೆಗಳ ಕುರಿತು ಚರ್ಚಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಹವಾಮಾನ ಬದಲಾವಣೆ ವಿರುದ್ಧದ ಜಾಗತಿಕ ಪ್ರಯತ್ನಗಳಲ್ಲಿ ನಿರಂತರವಾಗಿ ಪರಿಹಾರದ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಭೂಪೇಂದ್ರ ಯಾದವ್ ತಿಳಿಸಿದರು.
ಹವಾಮಾನ ಗುರಿಗಳನ್ನು ಸಾಧಿಸಲು ಎಲ್ಲ ರಾಷ್ಟ್ರಗಳ ಸಹಕಾರ ಮತ್ತು ಸಾಮೂಹಿಕ ಪ್ರಯತ್ನ ಅಗತ್ಯವಾಗಿದ್ದು, ಭಾರತ ತನ್ನ ಜವಾಬ್ದಾರಿಯುತ ಪಾತ್ರವನ್ನು ಮುಂದುವರಿಸಲಿದೆ ಎಂದು ಅವರು ಹೇಳಿದರು.
ಭಾರತದ ಸಕಾರಾತ್ಮಕ ಮತ್ತು ಸಹಕಾರದ ಮನೋಭಾವವನ್ನು ಕ್ರಿಸ್ ಬೋವೆನ್ ಶ್ಲಾಘಿಸಿದರು. ಹವಾಮಾನ ಬದಲಾವಣೆಗೆ ದೀರ್ಘಕಾಲೀನ ಪರಿಹಾರ ರೂಪಿಸುವ ನಿಟ್ಟಿನಲ್ಲಿ ಭಾರತ-ಆಸ್ಟ್ರೇಲಿಯಾ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಉಭಯ ನಾಯಕರು ಒಪ್ಪಿಗೆ ಸೂಚಿಸಿದರು. ಸಿಒಪಿ-31ಕ್ಕೂ ಮುನ್ನ ಎರಡೂ ದೇಶಗಳ ಹವಾಮಾನ ಸಂಬಂಧಿತ ಸಮನ್ವಯ ಬಲಪಡಿಸುವಲ್ಲಿ ಸಭೆ ಮಹತ್ವದ್ದಾಗಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.