
ನವದೆಹಲಿ, 20 ಆಗಸ್ಟ್ (ಹಿ.ಸ.):
ಆ್ಯಂಕರ್:ನವದೆಹಲಿ, ಆಗಸ್ಟ್ 20: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜಯಂತಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅವರನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ರಾಜೀವ್ ಗಾಂಧಿ ಅವರಿಗೆ ಜಯಂತಿಯ ಸಂದರ್ಭದಲ್ಲಿ ಗೌರವ ನಮನ ಸಲ್ಲಿಸಿದರು.
ರಾಜೀವ್ ಗಾಂಧಿ ಅವರ ಕುಟುಂಬದ ಸದಸ್ಯರಾದ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆಯ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ರಾಬರ್ಟ್ ವಾದ್ರಾ ಅವರು ದೆಹಲಿಯ ವೀರಭೂಮಿಗೆ ತೆರಳಿ ಪುಷ್ಪ ನಮನ ಸಲ್ಲಿಸಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ರಾಜೀವ್ ಗಾಂಧಿ ಅವರ ಜಯಂತಿ ಅಂಗವಾಗಿ ಗೌರವ ನಮನ ಸಲ್ಲಿಸಿದರು. ದೇಶದ ಅಭಿವೃದ್ಧಿ ಪಯಣದಲ್ಲಿ ರಾಜೀವ್ ಗಾಂಧಿ ಅವರ ಕೊಡುಗೆಯನ್ನು ರಾಜನಾಥ್ ಸಿಂಗ್ ಸ್ಮರಿಸಿದ್ದಾರೆ.
ರಾಜೀವ್ ಗಾಂಧಿ ಅವರ ಜಯಂತಿಯನ್ನು ದೇಶಾದ್ಯಂತ ‘ಸದ್ಭಾವನಾ ದಿನ’ವಾಗಿ ಆಚರಿಸಲಾಗುತ್ತದೆ. 1944ರ ಆಗಸ್ಟ್ 20ರಂದು ಬಾಂಬೆ (ಈಗಿನ ಮುಂಬೈ)ಯಲ್ಲಿ ಜನಿಸಿದ ರಾಜೀವ್ ಗಾಂಧಿ, ತಮ್ಮ ತಾಯಿ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯ ಬಳಿಕ 1984ರಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ, ನಂತರ ಭಾರತದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು. 1984ರಿಂದ 1989ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.