
ನವದೆಹಲಿ, 19 ಆಗಸ್ಟ್ (ಹಿ.ಸ.):
ಆ್ಯಂಕರ್:ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಗುರುವಾರ ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆಯಲಿರುವ ದಕ್ಷಿಣ ವಲಯ ಪರಿಷತ್ತಿನ 31ನೇ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.
ದಕ್ಷಿಣ ವಲಯ ಪರಿಷತ್ತಿನಲ್ಲಿ ಆಂಧ್ರಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಪುದುಚೇರಿ, ಅಂಡಮಾನ್-ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶಗಳು ಸೇರಿವೆ. ಈ ಬಾರಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಉಪಾಧ್ಯಕ್ಷರಾಗಿ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯ ಪುನರ್‌ರಚನಾ ಕಾಯ್ದೆ-1956ರ 15ರಿಂದ 22ನೇ ವಿಧಿಗಳ ಅಡಿಯಲ್ಲಿ ದೇಶದಲ್ಲಿ ಐದು ವಲಯ ಪರಿಷತ್ತುಗಳನ್ನು ರಚಿಸಲಾಗಿದೆ. ಕೇಂದ್ರ ಗೃಹ ಸಚಿವರು ದಕ್ಷಿಣ ವಲಯ ಪರಿಷತ್ತಿನ ಅಧ್ಯಕ್ಷರಾಗಿದ್ದು, ಸದಸ್ಯ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ಒಬ್ಬರು ಉಪಾಧ್ಯಕ್ಷರಾಗಿರುತ್ತಾರೆ.
ತಮಿಳುನಾಡು ಸರ್ಕಾರದ ಆತಿಥ್ಯದಲ್ಲಿ ಕೇಂದ್ರ ಗೃಹ ಸಚಿವಾಲಯದ ಅಂತರರಾಜ್ಯ ಪರಿಷತ್ ಕಾರ್ಯದರ್ಶಾಲಯ ಸಭೆಯನ್ನು ಆಯೋಜಿಸಿದೆ. ಸದಸ್ಯ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳು, ಉಪರಾಜ್ಯಪಾಲರು, ಆಡಳಿತಾಧಿಕಾರಿಗಳು, ಪ್ರತಿ ರಾಜ್ಯದ ಇಬ್ಬರು ಹಿರಿಯ ಸಚಿವರು, ಮುಖ್ಯ ಕಾರ್ಯದರ್ಶಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸಹಕಾರಿ ಒಕ್ಕೂಟ ವ್ಯವಸ್ಥೆಯಡಿ ಕೇಂದ್ರ ಹಾಗೂ ರಾಜ್ಯಗಳ ನಡುವೆ ಸಮನ್ವಯ ಮತ್ತು ಸಹಕಾರ ಹೆಚ್ಚಿಸುವಲ್ಲಿ ವಲಯ ಪರಿಷತ್ತುಗಳು ಪ್ರಮುಖ ಪಾತ್ರ ವಹಿಸುತ್ತಿವೆ. ರಾಜ್ಯಗಳ ನಡುವಿನ ವಿವಾದಗಳು ಹಾಗೂ ವಿವಿಧ ಅಭಿವೃದ್ಧಿ ಮತ್ತು ಆಡಳಿತಾತ್ಮಕ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ.
ಕಳೆದ 12 ವರ್ಷಗಳಲ್ಲಿ ವಿವಿಧ ವಲಯ ಪರಿಷತ್ತುಗಳು ಹಾಗೂ ಅವುಗಳ ಸ್ಥಾಯಿ ಸಮಿತಿಗಳ ಒಟ್ಟು 69 ಸಭೆಗಳು ನಡೆದಿವೆ. ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧಗಳ ತ್ವರಿತ ತನಿಖೆ, ತ್ವರಿತ ವಿಚಾರಣಾ ವಿಶೇಷ ನ್ಯಾಯಾಲಯಗಳ ಸ್ಥಾಪನೆ, ಶಿಕ್ಷಣ, ಆಂಧ್ರಪ್ರದೇಶ ಪುನರ್‌ರಚನಾ ಕಾಯ್ದೆ, ಜಲ ಹಂಚಿಕೆ ಯೋಜನೆಗಳು, ಪ್ರಧಾನಮಂತ್ರಿ ಆವಾಸ್ ಯೋಜನೆ-ಗ್ರಾಮೀಣ ಹಾಗೂ ನಾಗರಿಕ ವಿಮಾನಯಾನ ಸೇರಿದಂತೆ ರಾಷ್ಟ್ರೀಯ ಮಹತ್ವದ ಹಲವು ವಿಷಯಗಳು ಈ ಸಭೆಗಳಲ್ಲಿ ಚರ್ಚೆಯಾಗಿವೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.