
ಕೋಲ್ಕತ್ತಾ, 19 ಆಗಸ್ಟ್ (ಹಿ.ಸ.):
ಆ್ಯಂಕರ್:ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಜತೆ ಸಂಪರ್ಕ ಹೊಂದಿದ್ದಾನೆ ಎನ್ನಲಾದ ಪಾಕಿಸ್ತಾನಿ ಪ್ರಜೆ ವಹಾಬ್ ಆಲಂನ ಮೂರನೇ ಸ್ಥಳೀಯ ಸಹಚರನನ್ನು ಪಶ್ಚಿಮ ಬಂಗಾಳ ವಿಶೇಷ ಕಾರ್ಯಪಡೆ ಬಂಧಿಸಿದೆ. ಜಫರ್ ಶಮ್ಸ್ ಅಲಿಯಾಸ್ ಸನ್ನಿ ಬಂಧಿತ ಆರೋಪಿ.
ಪೂರ್ವ ಕೊಲ್ಕತ್ತಾದ ಟೋಪ್ಸಿಯಾ ನಿವಾಸಿಯಾಗಿರುವ ಸನ್ನಿ, ವಹಾಬ್ ಆಲಂ ಬಂಧನದ ಬಳಿಕ ತಲೆಮರೆಸಿಕೊಂಡಿದ್ದ. ವಿಶೇಷ ಕಾರ್ಯಪಡೆ ಹುಗ್ಲಿ ಜಿಲ್ಲೆಯ ರಿಷಡಾದಲ್ಲಿ ಆತನನ್ನು ಬಂಧಿಸಿದೆ.
ಆಲಂನ ಚಟುವಟಿಕೆಗಳಲ್ಲಿ ಸನ್ನಿ ಯಾವ ರೀತಿಯಲ್ಲಿ ಭಾಗಿಯಾಗಿದ್ದ ಎಂಬುದನ್ನು ತಿಳಿಯಲು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಭಾರತದಿಂದ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನದ ಐಎಸ್‌ಐಗೆ ರವಾನಿಸಲು ಆಲಂ ರೂಪಿಸಿದ್ದ ಎನ್ನಲಾದ ಗುಪ್ತ ಜಾಲವನ್ನು ಬಲಪಡಿಸುವಲ್ಲಿ ಸನ್ನಿ ಪಾತ್ರವಹಿಸಿದ್ದಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.
ಎರಡು ದಿನಗಳ ಹಿಂದೆ ಆಲಂನ ಮತ್ತೊಬ್ಬ ಸಹಚರ ಇಮ್ರಾನ್ ಹುಸೇನ್‌ನನ್ನು ಟೋಪ್ಸಿಯಾದ ನಿವಾಸದಿಂದ ಬಂಧಿಸಲಾಗಿತ್ತು. ಅದಕ್ಕೂ ಮೊದಲು ಆತನ ಆಪ್ತ ಸಹಚರ ಮೊಹಮ್ಮದ್ ಇಜಾಜ್‌ನನ್ನೂ ಇದೇ ಪ್ರದೇಶದಿಂದ ಬಂಧಿಸಲಾಗಿತ್ತು.
ತನಿಖೆಯ ಪ್ರಕಾರ, ಆಲಂ 2012ರಲ್ಲಿ ನೇಪಾಳದ ಮೂಲಕ ಅಕ್ರಮವಾಗಿ ಪಶ್ಚಿಮ ಬಂಗಾಳ ಪ್ರವೇಶಿಸಿದ್ದ ಎನ್ನಲಾಗಿದೆ. ಬಳಿಕ ಇಜಾಜ್ ಮನೆಯಲ್ಲಿ ವಾಸವಾಗಿದ್ದ. ಭಾರತೀಯ ಗುರುತಿನ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲು ಇಜಾಜ್ ಸಹಾಯ ಮಾಡಿದ್ದಾನೆ ಎಂಬ ಆರೋಪವಿದೆ.
ಆಲಂ, ಇಜಾಜ್ ಮತ್ತು ಇಮ್ರಾನ್‌ನ ವಿಚಾರಣೆ ವೇಳೆ ಸನ್ನಿ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದೇ ಪ್ರಕರಣದಲ್ಲಿ ಆಗಸ್ಟ್ 14ರಂದು ಭಾರತ-ಬಾಂಗ್ಲಾದೇಶ ಗಡಿಗೆ ಹೊಂದಿಕೊಂಡಿರುವ ಕೂಚ್‌ಬಿಹಾರ್ ಜಿಲ್ಲೆಯ ಸಾಹೇಬ್‌ಗಂಜ್ ಪ್ರದೇಶದಿಂದ ಮೂವರು ಶಂಕಿತ ಪಾಕಿಸ್ತಾನಿ ಗೂಢಚಾರರನ್ನೂ ಬಂಧಿಸಲಾಗಿತ್ತು. ರಾಶಿದುಲ್ ಹಕ್, ನೂರ್ ನಸೀರುದ್ದೀನ್ ಅಲಿ ಮತ್ತು ಶಫೀಕುಲ್ ಇಸ್ಲಾಂ ಬಂಧಿತರು. ಮೂವರೂ ಭಾರತೀಯರು ಎಂದು ತಿಳಿದುಬಂದಿದೆ.
ಈ ನಡುವೆ ರಾಷ್ಟ್ರೀಯ ತನಿಖಾ ಸಂಸ್ಥೆ ಕೂಡ ವಹಾಬ್ ಆಲಂ ಪ್ರಕರಣದ ಕುರಿತು ಮಾಹಿತಿ ಸಂಗ್ರಹಿಸಲು ಆರಂಭಿಸಿದೆ. ಆಲಂಗೆ ಐಎಸ್‌ಐ ಜತೆ ಸಂಪರ್ಕವಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ವಿಶೇಷ ಕಾರ್ಯಪಡೆಯಿಂದ ತನಿಖೆಯ ವಿವರ ಹಾಗೂ ಇದುವರೆಗೆ ಸಂಗ್ರಹಿಸಿರುವ ಮಾಹಿತಿಯನ್ನು ಎನ್‌ಐಎ ಕೇಳಿದೆ. ಅಗತ್ಯವಿದ್ದರೆ ಆಲಂ, ಇಜಾಜ್, ಇಮ್ರಾನ್ ಸೇರಿದಂತೆ ಕೂಚ್‌ಬಿಹಾರ್‌ನಲ್ಲಿ ಬಂಧಿತರಾಗಿರುವ ಮೂವರನ್ನೂ ಎನ್‌ಐಎ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.