
ನವದೆಹಲಿ, 18 ಆಗಸ್ಟ್ (ಹಿ.ಸ.):
ಆ್ಯಂಕರ್:
ಕರ್ನಾಟಕದ ರಾಯಚೂರು ನಗರದ ಯಕಲಸಪುರದಲ್ಲಿ 35 ಎಕರೆ ಪ್ರದೇಶದಲ್ಲಿ ಹರಡಿದ್ದ ಬೃಹತ್ ಕಸದ ರಾಶಿಯನ್ನು ವೈಜ್ಞಾನಿಕವಾಗಿ ತೆರವುಗೊಳಿಸಿ ಹಸಿರು ವಲಯವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ತಿಳಿಸಿದೆ.
ಯೋಜನೆಯಡಿ 62,252 ಮೆಟ್ರಿಕ್ ಟನ್ ಹಳೆಯ ಕಸವನ್ನು ವಿಲೇವಾರಿ ಮಾಡಲಾಗಿದ್ದು, ಸುಮಾರು 22 ಎಕರೆ ನಗರ ಭೂಮಿಯನ್ನು ಪುನಃ ಬಳಕೆಗೆ ಪಡೆಯಲಾಗಿದೆ. ಈ ಪ್ರದೇಶದಲ್ಲಿ ಇದೀಗ ಮಿಯಾವಾಕಿ ಮಾದರಿಯ ಅರಣ್ಯ ಬೆಳೆಸಲಾಗುತ್ತಿದ್ದು, ವಿಶ್ವ ಪರಿಸರ ದಿನವಾದ ಜೂನ್ 5ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಯೋಜನೆಗೆ ಚಾಲನೆ ನೀಡಿದ್ದರು.
ಅಂದಿನಿಂದ ಸಸಿಗಳನ್ನು ನೆಡುವ ಕಾರ್ಯ ಆರಂಭವಾಗಿದ್ದು, ಇದುವರೆಗೆ ಬಿದಿರು ಸೇರಿದಂತೆ ಸ್ಥಳೀಯ ಜಾತಿಗಳ ಸುಮಾರು 60,000 ಸಸಿಗಳನ್ನು ನೆಡಲಾಗಿದೆ. ಈ ಸಸಿಗಳು ಮಣ್ಣಿನ ಗುಣಮಟ್ಟ ಸುಧಾರಿಸುವುದು, ಇಂಗಾಲ ಹೀರಿಕೊಳ್ಳುವುದು, ಜೀವವೈವಿಧ್ಯ ಹೆಚ್ಚಿಸುವುದು ಹಾಗೂ ವಾಯು ಶುದ್ಧೀಕರಣಕ್ಕೆ ನೆರವಾಗಲಿವೆ. ಮುಂದಿನ ಒಂದು ವರ್ಷದಲ್ಲಿ ಪ್ರದೇಶ ಸಂಪೂರ್ಣ ಹಸಿರು ಹೊದಿಕೆಯಿಂದ ಆವೃತವಾಗುವ ನಿರೀಕ್ಷೆಯಿದೆ.
ರಾಯಚೂರು ನಗರ ಪಾಲಿಕೆ ‘ವಿಷಕಾರಿ ತ್ಯಾಜ್ಯದಿಂದ ಪರಿಸರ ಸಂಪತ್ತು’ ಎಂಬ ಪರಿಕಲ್ಪನೆಯಡಿ ಯೋಜನೆಯನ್ನು ಕೈಗೊಂಡಿದೆ. ಈ ಹಿಂದೆ ಕಸದ ರಾಶಿಯಿಂದ ದುರ್ವಾಸನೆ, ಕೊಳಚೆ ನೀರು ಸೋರಿಕೆ ಹಾಗೂ ಪರಿಸರ ಮಾಲಿನ್ಯದಿಂದ ಸುತ್ತಮುತ್ತಲಿನ ಜನರು ತೊಂದರೆ ಅನುಭವಿಸುತ್ತಿದ್ದರು. ಇದೀಗ ಅದೇ ಸ್ಥಳವನ್ನು ನಗರಕ್ಕೆ ಮಾದರಿ ಹಸಿರು ಪ್ರದೇಶವಾಗಿ ರೂಪಿಸಲಾಗುತ್ತಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.