

ಭಿಂಡ್/ಗ್ವಾಲಿಯರ್, 18 ಆಗಸ್ಟ್ (ಹಿ.ಸ.):
ಆ್ಯಂಕರ್:
ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 8 ಕಾರ್ಮಿಕರು ಮೃತಪಟ್ಟಿದ್ದು, 23 ಮಂದಿ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ-719ರಲ್ಲಿ ಗೋಹದ್ ಚೌರಾಹಾ ಠಾಣಾ ವ್ಯಾಪ್ತಿಯ ಛೀಮ್ಕಾ ಗ್ರಾಮದ ಬಳಿ ವೇಗವಾಗಿ ಸಾಗುತ್ತಿದ್ದ ಕಾರ್ಮಿಕರಿದ್ದ ಪಿಕಪ್ ವಾಹನ ಎದುರಿನಿಂದ ಬರುತ್ತಿದ್ದ ಡಂಪರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಪಿಕಪ್ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹಲವು ಕಾರ್ಮಿಕರು ವಾಹನದೊಳಗೆ ಸಿಲುಕಿಕೊಂಡಿದ್ದರು.
ಹೆದ್ದಾರಿಯಲ್ಲಿ ಕುಳಿತಿದ್ದ ಜಾನುವಾರುಗಳನ್ನು ತಪ್ಪಿಸಲು ಚಾಲಕ ವಾಹನವನ್ನು ತಿರುಗಿಸಿದಾಗ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಡಂಪರ್‌ಗೆ ಡಿಕ್ಕಿ ಹೊಡೆದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಪಘಾತದ ನಿಖರ ಕಾರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಅಪಘಾತದ ಮಾಹಿತಿ ದೊರೆತ ತಕ್ಷಣ ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ ವಾಹನದಲ್ಲಿ ಸಿಲುಕಿದ್ದವರನ್ನು ಹೊರತೆಗೆದರು. ಐವರು ಸ್ಥಳದಲ್ಲೇ ಮೃತಪಟ್ಟರೆ, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೂವರು ಮೃತಪಟ್ಟಿದ್ದಾರೆ. ಗಾಯಾಳುಗಳಿಗೆ ಗೋಹದ್ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಗಂಭೀರ ಸ್ಥಿತಿಯಲ್ಲಿದ್ದವರನ್ನು ಗ್ವಾಲಿಯರ್‌ಗೆ ರವಾನಿಸಲಾಗಿದೆ.
ಚಂಬಲ್ ವಲಯದ ಡಿಐಜಿ ಸುನೀಲ್ ಕುಮಾರ್ ಜೈನ್ ಅವರು 8 ಕಾರ್ಮಿಕರ ಸಾವನ್ನು ಹಾಗೂ 23 ಮಂದಿ ಗಾಯಗೊಂಡಿರುವುದನ್ನು ದೃಢಪಡಿಸಿದ್ದಾರೆ. ಮೃತರು ಹಾಗೂ ಗಾಯಾಳುಗಳ ಗುರುತು ಪತ್ತೆ ಕಾರ್ಯ ಮುಂದುವರಿದಿದೆ.
ಅಪಘಾತಕ್ಕೀಡಾದ ಕಾರ್ಮಿಕರು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಪಚಗವಾಂ ಮತ್ತು ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳಾಗಿದ್ದು, ಗ್ವಾಲಿಯರ್ ಜಿಲ್ಲೆಯ ಡಬ್ರಾ ಸಮೀಪದ ಚಿನೌರ್ ಗ್ರಾಮದಲ್ಲಿ ಭತ್ತ ನಾಟಿ ಕೆಲಸಕ್ಕೆ ಬಂದಿದ್ದರು. ಕೆಲಸ ಮುಗಿಸಿಕೊಂಡು ಪಿಕಪ್ ವಾಹನದಲ್ಲಿ ತಮ್ಮ ಊರಿಗೆ ಮರಳುತ್ತಿದ್ದ ವೇಳೆ ದುರಂತ ಸಂಭವಿಸಿದೆ. ವಾಹನದಲ್ಲಿ ಒಟ್ಟು 29 ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎಂದು ಗಾಯಾಳು ನಂದಲಾಲ್ ತಿಳಿಸಿದ್ದಾರೆ.
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಐದು ಮೃತದೇಹಗಳನ್ನು ಗೋಹದ್‌ನಲ್ಲಿ ಹಾಗೂ ಮೂರು ಮೃತದೇಹಗಳನ್ನು ಗ್ವಾಲಿಯರ್‌ನಲ್ಲಿ ಇರಿಸಲಾಗಿದೆ. ಗಾಯಾಳುಗಳ ಕುಟುಂಬಸ್ಥರನ್ನು ಸಂಪರ್ಕಿಸುವ ಕಾರ್ಯವೂ ನಡೆಯುತ್ತಿದೆ. ಅಪಘಾತದಿಂದ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು, ನಂತರ ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.