
ನವದೆಹಲಿ, 18 ಆಗಸ್ಟ್ (ಹಿ.ಸ.):
ಆ್ಯಂಕರ್:ಗೋವಾದಲ್ಲಿ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ರಾಷ್ಟ್ರಗೀತೆ ವಂದೇ ಮಾತರಂನ ಆರಂಭಿಕ ಎರಡು ಚರಣಗಳನ್ನು ಮಾತ್ರ ಹಾಡಿದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲೇ ಕಾಂಗ್ರೆಸ್ ವಂದೇ ಮಾತರಂ ಅನ್ನು ರಾಷ್ಟ್ರೀಯ ಗೀತೆಯಾಗಿ ನಿರ್ಧರಿಸಿತ್ತು. ಮಹಾತ್ಮ ಗಾಂಧೀಜಿ, ಪಂಡಿತ್ ನೆಹರು ಹಾಗೂ ಸರ್ದಾರ್ ಪಟೇಲ್ ಕೂಡ ಇದೇ ವಂದೇ ಮಾತರಂ ಹಾಡಿದ್ದರು ಎಂದು ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಖರ್ಗೆ, ಸರ್ಕಾರಗಳು ಬದಲಾದಂತೆ ರಾಷ್ಟ್ರೀಯ ಗೀತೆಯೂ ಬದಲಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಪ್ರಧಾನಿಯಾಗುವ ಮುನ್ನ ನರೇಂದ್ರ ಮೋದಿ ಕೂಡ ಇದೇ ವಂದೇ ಮಾತರಂ ಹಾಡಿದ್ದರು. ತಾನೂ ಇದೇ ಗೀತೆಯನ್ನು ಹಾಡಿರುವುದಾಗಿ ಅವರು ಹೇಳಿದರು.
ಸೋಮವಾರ ಗೋವಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ವಂದೇ ಮಾತರಂನ ಆರಂಭಿಕ ಎರಡು ಚರಣಗಳನ್ನು ಮಾತ್ರ ಹಾಡಲಾಗಿತ್ತು. ಈ ವೇಳೆ ಖರ್ಗೆ ವೇದಿಕೆಯಲ್ಲಿದ್ದರು. ಇದಕ್ಕೆ ವಿರೋಧ ವ್ಯಕ್ತವಾಗಿದ್ದು, ವಿವಾದಕ್ಕೆ ಕಾರಣವಾಗಿದೆ.
ಇದಕ್ಕೂ ಮುನ್ನ ಸ್ವಾತಂತ್ರ್ಯ ದಿನಾಚರಣೆಯಂದು ನವದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ವಂದೇ ಮಾತರಂ ಗಾಯನದ ಸಂದರ್ಭದಲ್ಲೂ ವಿವಾದ ಉಂಟಾಗಿತ್ತು. ಎರಡು ಚರಣಗಳ ಗಾಯನದ ಬಳಿಕ ಸೋನಿಯಾ ಗಾಂಧಿ ಅಸಹಜವಾಗಿ ಕಾಣಿಸಿಕೊಂಡಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಖರ್ಗೆ ಅವರ ವಯಸ್ಸಿನ ಹಿನ್ನೆಲೆಯಲ್ಲಿ ಅವರಿಗೆ ಕುಳಿತುಕೊಳ್ಳಲು ಕುರ್ಚಿ ನೀಡುವಂತೆ ಸೋನಿಯಾ ಸೂಚಿಸಿದ್ದರು ಎಂದು ಸ್ಪಷ್ಟಪಡಿಸಿದ್ದರು.
ಇದೇ ವಿಚಾರವಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ರಾಷ್ಟ್ರಗೀತೆ ಅಥವಾ ರಾಷ್ಟ್ರೀಯ ಗೀತೆಯ ಗಾಯನಕ್ಕೆ ಅಡ್ಡಿಪಡಿಸಿದರೆ ಶಿಕ್ಷೆ ವಿಧಿಸುವ ಪ್ರಸ್ತಾವಿತ ಕಾನೂನಿನ ಅಂಶಗಳನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚೆಗೆ ಲೋಕಸಭೆಯ ಮುಂಗಾರು ಅಧಿವೇಶನದ ಕೊನೆಯ ದಿನ ಮೊದಲ ಬಾರಿಗೆ ಸಂಪೂರ್ಣ ವಂದೇ ಮಾತರಂನ ಆರು ಚರಣಗಳನ್ನು ಹಾಡಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಸೇರಿದಂತೆ ಎಲ್ಲ ಸಂಸದರು ಈ ವೇಳೆ ಉಪಸ್ಥಿತರಿದ್ದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.