
ನವದೆಹಲಿ, 18 ಆಗಸ್ಟ್ (ಹಿ.ಸ.):
ಆ್ಯಂಕರ್:
ನೀಟ್ ಸೇರಿದಂತೆ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ಯಲ್ಲಿ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಅವರು ಮಹತ್ವದ ಸುಧಾರಣಾ ಕ್ರಮಗಳಿಗೆ ಮುಂದಾಗಿದ್ದಾರೆ. ಎನ್‌ಟಿಎಯಲ್ಲಿದ್ದ ಸುಮಾರು 600 ತಜ್ಞರು ಹಾಗೂ ಸಿಬ್ಬಂದಿಯನ್ನು ಬದಲಾಯಿಸಿ, ಹೊಸ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನೇಮಿಸಲು ಸಚಿವರು ಸೂಚಿಸಿದ್ದಾರೆ.
ಈ ಕುರಿತು ಸಚಿವರ ಮಾಧ್ಯಮ ಕಾರ್ಯಾಲಯ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಎನ್‌ಟಿಎ ಕಾರ್ಯವೈಖರಿ, ಪರೀಕ್ಷಾ ವ್ಯವಸ್ಥೆ, ಪ್ರಶ್ನೆಪತ್ರಿಕೆಗಳ ಸುರಕ್ಷತೆ ಹಾಗೂ ಗೌಪ್ಯ ಕಾರ್ಯಾಚರಣೆ ಕುರಿತು ಸಚಿವರು ಸತತ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಎನ್‌ಟಿಎ ಹಾಗೂ ಶಿಕ್ಷಣ ಸಚಿವಾಲಯದ ಉನ್ನತ ಅಧಿಕಾರಿಗಳೊಂದಿಗೆ ಸರಣಿ ಸಭೆ ನಡೆಸಿದ ಅವರು, ಸಂಸ್ಥೆಯ ಒಳಾಂಗಣ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಶೀಲಿಸಿ ಹಲವು ನಿರ್ಣಾಯಕ ಕ್ರಮಗಳನ್ನು ಕೈಗೊಂಡಿದ್ದಾರೆ.
ಮಂಗಳವಾರ ನವದೆಹಲಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಎನ್‌ಟಿಎ ಮಹಾನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಸಭೆ ನಡೆಸಿದ ಪ್ರಲ್ಹಾದ ಜೋಶಿ, ಪರೀಕ್ಷಾ ಮತ್ತು ಗೌಪ್ಯ ಕಾರ್ಯಾಚರಣೆ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ನಿರ್ದೇಶನ ನೀಡಿದರು. ಪರೀಕ್ಷಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರ ಜತೆಗೆ, ಪರೀಕ್ಷೆಗಳನ್ನು ಸುಗಮವಾಗಿ, ಸುರಕ್ಷಿತವಾಗಿ ಹಾಗೂ ಪಾರದರ್ಶಕವಾಗಿ ನಡೆಸಲು ಅಗತ್ಯ ಭದ್ರತಾ ವ್ಯವಸ್ಥೆ ಮತ್ತು ಮೂಲಸೌಕರ್ಯ ಕಲ್ಪಿಸುವಂತೆ ಸೂಚಿಸಿದರು.
600 ತಜ್ಞರಿಗೆ ಗೇಟ್‌ಪಾಸ್
ಸಚಿವರ ಕಟ್ಟುನಿಟ್ಟಿನ ಸೂಚನೆಯ ಬೆನ್ನಲ್ಲೇ ಎನ್‌ಟಿಎಯಲ್ಲಿದ್ದ ಸುಮಾರು 600 ತಜ್ಞರನ್ನು ಬದಲಾಯಿಸಲಾಗಿದೆ. ಅವರ ಬದಲಿಗೆ ಹೊಸ ತಜ್ಞರನ್ನು ಸೇರ್ಪಡೆಗೊಳಿಸಲಾಗಿದೆ ಎಂದು ಎನ್‌ಟಿಎ ಮಹಾನಿರ್ದೇಶಕರು ಪರಿಶೀಲನಾ ಸಭೆಯಲ್ಲಿ ಸಚಿವರಿಗೆ ಮಾಹಿತಿ ನೀಡಿದ್ದಾರೆ. ಸಂಸ್ಥೆಯ ಕಾರ್ಯವೈಖರಿಯಲ್ಲಿ ಹೊಸ ವೃತ್ತಿಪರತೆ ಹಾಗೂ ಜವಾಬ್ದಾರಿತನ ತರಲು ಈ ಕ್ರಮ ಕೈಗೊಳ್ಳಲಾಗಿದೆ.
ಪರೀಕ್ಷಾ ತಂಡ ಪುನರಚನೆ
ಎನ್‌ಟಿಎಯ ಪರೀಕ್ಷಾ ತಂಡವನ್ನು ಸಂಪೂರ್ಣವಾಗಿ ಪುನರ್‌ರಚಿಸಲು ನಿರ್ಧರಿಸಲಾಗಿದೆ. ಮುಂದಿನ ಎರಡು-ಮೂರು ವಾರಗಳಲ್ಲಿ 20ರಿಂದ 25 ಹೊಸ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ. ಪರೀಕ್ಷೆಗಳ ಪ್ರಮಾಣ ಮತ್ತು ಅಗತ್ಯತೆ ಆಧರಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಅಧಿಕಾರಿಗಳನ್ನು ನೇಮಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ.
ನಾಲ್ಕು ಹಂತದ ಪ್ರಶ್ನೆಪತ್ರಿಕೆ ಪರಿಶೀಲನೆ
ಪ್ರಶ್ನೆಪತ್ರಿಕೆ ಸೋರಿಕೆಗೆ ಕಡಿವಾಣ ಹಾಕಲು ಪ್ರಶ್ನೆಪತ್ರಿಕೆಗಳ ಸಿದ್ಧತೆ ಮತ್ತು ಪರಿಶೀಲನಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತಿದೆ. ಪ್ರಶ್ನೆಪತ್ರಿಕೆಗಳನ್ನು ನಾಲ್ಕು ಹಂತಗಳಲ್ಲಿ ಪರಿಶೀಲಿಸುವ ವ್ಯವಸ್ಥೆ ಜಾರಿಗೆ ತರಲು ಚರ್ಚೆ ನಡೆಸಿ, ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ. ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದರಿಂದ ಹಿಡಿದು ಮುದ್ರಣ, ಸಂಗ್ರಹಣೆ ಮತ್ತು ಪರೀಕ್ಷಾ ಕೇಂದ್ರಗಳಿಗೆ ತಲುಪಿಸುವವರೆಗಿನ ಪ್ರಕ್ರಿಯೆಯಲ್ಲಿ ಕಟ್ಟುನಿಟ್ಟಿನ ಗೌಪ್ಯತೆ ಕಾಪಾಡುವಂತೆ ಸೂಚಿಸಲಾಗಿದೆ.
ಎನ್‌ಟಿಎ ಕಚೇರಿ ಸ್ಥಳಾಂತರ
ಎನ್‌ಟಿಎಯ ಕಚೇರಿಗಳನ್ನು ಹೊಸ ಆವರಣಕ್ಕೆ ಸ್ಥಳಾಂತರಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಹೊಸ ಕಚೇರಿಗಳಲ್ಲಿ ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಸಹಕಾರ ಪಡೆಯುವಂತೆ ನಿರ್ದೇಶಿಸಲಾಗಿದೆ.
ಗೌಪ್ಯ ಕಾರ್ಯಾಚರಣೆ ನಡೆಯುವ ಸ್ಥಳಗಳಲ್ಲಿ ನಿಯಂತ್ರಿತ ಪ್ರವೇಶ ವ್ಯವಸ್ಥೆ, ಪ್ರತ್ಯೇಕ ಭದ್ರತಾ ವಲಯ ಹಾಗೂ ಅಂತರ್ಜಾಲ ಸಂಪರ್ಕದಿಂದ ಪ್ರತ್ಯೇಕವಾಗಿರುವ ಸುರಕ್ಷಿತ ವ್ಯವಸ್ಥೆ ಕಲ್ಪಿಸುವ ಬಗ್ಗೆಯೂ ಗಮನಹರಿಸಲಾಗಿದೆ. ಪರೀಕ್ಷಾ ಪ್ರಕ್ರಿಯೆಯ ಪ್ರತಿಯೊಂದು ಹಂತದ ಸಂಪೂರ್ಣ ಲೆಕ್ಕಪರಿಶೋಧನೆ ನಡೆಸಿ, ಅಗತ್ಯ ಸುಧಾರಣೆಗಳ ಕುರಿತು ವರದಿ ಸಲ್ಲಿಸುವಂತೆ ಎನ್‌ಟಿಎಗೆ ಸೂಚಿಸಲಾಗಿದೆ.
10 ಹೊಸ ವೃತ್ತಿಪರ ಹುದ್ದೆಗಳ ನೇಮಕ
ಎನ್‌ಟಿಎಯ ಆಡಳಿತ ಮತ್ತು ತಾಂತ್ರಿಕ ಸಾಮರ್ಥ್ಯ ಹೆಚ್ಚಿಸಲು ಸುಮಾರು 10 ಹೊಸ ವೃತ್ತಿಪರ ನಾಯಕತ್ವ ಹುದ್ದೆಗಳನ್ನು ಸೃಷ್ಟಿಸಿ ನೇಮಕಾತಿ ನಡೆಸಲು ಸಿದ್ಧತೆ ನಡೆದಿದೆ. ಮುಖ್ಯ ತಂತ್ರಜ್ಞಾನ ಅಧಿಕಾರಿ, ಮುಖ್ಯ ಹಣಕಾಸು ಅಧಿಕಾರಿ, ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ, ಪರೀಕ್ಷಾ ಭದ್ರತೆಯ ಮಹಾಪ್ರಬಂಧಕ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಸೈಕೋಮೆಟ್ರಿಕ್ಸ್ ವಿಭಾಗದ ಮಹಾಪ್ರಬಂಧಕ ಸೇರಿದಂತೆ ವಿವಿಧ ಪ್ರಮುಖ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ.
ಖಾಸಗಿ ವಲಯದ ತಜ್ಞರಿಗೂ ಅವಕಾಶ
ಸೈಬರ್ ಭದ್ರತೆ, ಸೈಕೋಮೆಟ್ರಿಕ್ಸ್, ಪ್ರಶ್ನೆಪತ್ರಿಕೆ ವಿನ್ಯಾಸ ಸೇರಿದಂತೆ ವಿಶೇಷ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಖಾಸಗಿ ವಲಯದ ತಜ್ಞರನ್ನು ಎನ್‌ಟಿಎಗೆ ಕರೆತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಮತ್ತು ವೃತ್ತಿಪರ ಪರಿಣತಿಯನ್ನು ಬಳಸಿಕೊಂಡು ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಇದಾಗಿದೆ.
ವಿದ್ಯಾರ್ಥಿಗಳ ಹಿತವೇ ಆದ್ಯತೆ
ಪರೀಕ್ಷಾ ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಲೋಪಕ್ಕೆ ಅವಕಾಶ ನೀಡಬಾರದು. ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಲು ಸಾಧ್ಯವಿಲ್ಲ. ಪಾರದರ್ಶಕ, ಸುರಕ್ಷಿತ ಹಾಗೂ ವಿಶ್ವಾಸಾರ್ಹ ಪರೀಕ್ಷಾ ವ್ಯವಸ್ಥೆ ರೂಪಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಪರೀಕ್ಷಾ ಕೇಂದ್ರಗಳ ಭದ್ರತೆ, ಪ್ರಶ್ನೆಪತ್ರಿಕೆಗಳ ಗೌಪ್ಯತೆ, ಸೈಬರ್ ಸುರಕ್ಷತೆ, ಪರೀಕ್ಷಾ ಸಿಬ್ಬಂದಿಯ ಜವಾಬ್ದಾರಿ ಹಾಗೂ ಫಲಿತಾಂಶ ಪ್ರಕಟಿಸುವವರೆಗಿನ ಸಂಪೂರ್ಣ ಪ್ರಕ್ರಿಯೆಯನ್ನು ಕಟ್ಟುನಿಟ್ಟಿನ ಮೇಲ್ವಿಚಾರಣೆಗೆ ಒಳಪಡಿಸುವಂತೆ ಸಚಿವರು ಸೂಚಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.