
ಗದಗ, 05 ಜುಲೈ (ಹಿ.ಸ.)
ಆ್ಯಂಕರ್:- ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ನರಗುಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ಅವರು ಗದಗ ಜಿಲ್ಲೆ ನರಗುಂದ ತಾಲೂಕಿನ
ಶಿರೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರೋಳ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಿವಾರದಂದು ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಕರ್ತವ್ಯದಲ್ಲಿರಬೇಕಿದ್ದ ಇಬ್ಬರು ವೈದ್ಯಾಧಿಕಾರಿಗಳು ಮೇಲಾಧಿಕಾರಿಗಳ ಅನುಮತಿ ಪಡೆಯದೆ ಅನಧಿಕೃತವಾಗಿ ಗೈರಾಗಿರುವುದು ಬೆಳಕಿಗೆ ಬಂತು. ಆಸ್ಪತ್ರೆಯ ಸಿಬ್ಬಂದಿ ಹಾಜರಾತಿ ಪುಸ್ತಕ ಪರಿಶೀಲಿಸಿದ ಇಓ ಅವರು, ತಾಲೂಕು ಆರೋಗ್ಯಾಧಿಕಾರಿ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮಾಹಿತಿ ಪಡೆದಾಗ ವೈದ್ಯರು ಯಾವುದೇ ಅನುಮತಿ ಪಡೆಯದೆ ಗೈರಾಗಿರುವುದು ದೃಢಪಟ್ಟಿತು.
ವೈದ್ಯರ ಅನುಪಸ್ಥಿತಿಯಿಂದ ಆಸ್ಪತ್ರೆಗೆ ಆಗಮಿಸಿದ್ದ ರೋಗಿಗಳಿಗೆ ಸ್ಟಾಫ್ ನರ್ಸ್ಗಳೇ ಚಿಕಿತ್ಸೆ ನೀಡುತ್ತಿರುವುದು ಕಂಡುಬಂದಿತು. ಈ ಹಿನ್ನೆಲೆಯಲ್ಲಿ ಗೈರು ಹಾಜರಾದ ವೈದ್ಯರಿಗೆ ನೋಟಿಸ್ ಜಾರಿಗೊಳಿಸಿ ವರದಿ ಸಲ್ಲಿಸುವಂತೆ ಟಿಎಚ್ಒ ಅವರಿಗೆ ಇಓ ಸೂಚನೆ ನೀಡಿದರು. ಜೊತೆಗೆ ತಾಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ದೊರೆಯುವಂತೆ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.
ಬಳಿಕ ಆಸ್ಪತ್ರೆಯ ಹೊರರೋಗಿಗಳ ವಿಭಾಗ, ಔಷಧ ದಾಸ್ತಾನು ಕೊಠಡಿ, ಪ್ರಥಮ ಚಿಕಿತ್ಸಾ ಕೊಠಡಿ, ಒಳರೋಗಿಗಳ ವಾರ್ಡ್ ಹಾಗೂ ಶೌಚಾಲಯ ಸೇರಿದಂತೆ ವಿವಿಧ ವಿಭಾಗಗಳನ್ನು ಪರಿಶೀಲಿಸಿದರು. ಆಸ್ಪತ್ರೆ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿದ ಅವರು, ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗೆ ಕಾಳಜಿಯಿಂದ ಹಾಗೂ ಜವಾಬ್ದಾರಿಯಿಂದ ಚಿಕಿತ್ಸೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವೈದ್ಯರಿಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ ಸ್ಥಳೀಯರು ದೂರವಾಣಿ ಮೂಲಕ ದೂರು ನೀಡಿದ್ದ ಹಿನ್ನೆಲೆಯಲ್ಲಿ ಈ ದಿಢೀರ್ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಶಿರೋಳ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು
---------------
ಹಿಂದೂಸ್ತಾನ್ ಸಮಾಚಾರ್ / lalita MP