ಎಸ್ಸಿ-ಎಸ್ಟಿ ಕಾಲೋನಿಯಲ್ಲಿ ಬಯಲು ಶೌಚಕ್ಕೆ ತಡೆಗೆ ಕಟ್ಟುನಿಟ್ಟಿನ ಕ್ರಮ: ಇಓ
ಗದಗ, 05 ಜುಲೈ (ಹಿ.ಸ.) ಆ್ಯಂಕರ್:- ಗದಗ ಜಿಲ್ಲೆ ನರಗುಂದ ತಾಲೂಕಿನ ಹುಣಶಿಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಗಾಪೂರ ಗ್ರಾಮದ ಎಸ್ಸಿ-ಎಸ್ಟಿ ಕಾಲೋನಿಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ದಲಿತ ಸಂಘರ್ಷ ಸಮಿತಿಯ ನಾಮಫಲಕ ಹೊಂದಿರುವ ರಸ್ತೆಯಲ್ಲಿ ಕೆಲವರು ಬಯಲು ಶೌಚ ಮಾಡುತ್ತಿರು
ಫೋಟೋ


ಗದಗ, 05 ಜುಲೈ (ಹಿ.ಸ.)

ಆ್ಯಂಕರ್:- ಗದಗ ಜಿಲ್ಲೆ ನರಗುಂದ ತಾಲೂಕಿನ ಹುಣಶಿಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಗಾಪೂರ ಗ್ರಾಮದ ಎಸ್ಸಿ-ಎಸ್ಟಿ ಕಾಲೋನಿಯಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ದಲಿತ ಸಂಘರ್ಷ ಸಮಿತಿಯ ನಾಮಫಲಕ ಹೊಂದಿರುವ ರಸ್ತೆಯಲ್ಲಿ ಕೆಲವರು ಬಯಲು ಶೌಚ ಮಾಡುತ್ತಿರುವ ಕುರಿತು ಕಾಲೋನಿ ನಿವಾಸಿಗಳು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮೌಖಿಕ ದೂರು ನೀಡಿದ್ದರು.

ಈ ಹಿನ್ನೆಲೆಯಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ಚಿನಗುಂಡಿ ಹಾಗೂ ನರಗುಂದ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್.ಬಿ. ಮಾಳಗೊಂಡ ಅವರ ನೇತೃತ್ವದಲ್ಲಿ ಜಗಾಪೂರ ಗ್ರಾಮದ ಎಸ್ಸಿ-ಎಸ್ಟಿ ಕಾಲೋನಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದುಕೊರತೆ ಸಭೆ ನಡೆಸಿ ಸ್ಥಳ ಪರಿಶೀಲನೆ ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ಶ್ರೀಧರ್ ಚಿನಗುಂಡಿ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರವಿರುವ ಸ್ಥಳವು ಪವಿತ್ರ ಕ್ಷೇತ್ರದಂತಿದೆ. ಅಂತಹ ಸ್ಥಳವನ್ನು ಮಲೀನಗೊಳಿಸುವುದು ಅತ್ಯಂತ ಖಂಡನೀಯ. ಈ ಘಟನೆಯನ್ನು ತಾಲೂಕು ಪಂಚಾಯಿತಿ ತೀವ್ರವಾಗಿ ಖಂಡಿಸುತ್ತದೆ ಎಂದರು.

ಹುಣಶಿಕಟ್ಟಿ ಗ್ರಾಮ ಪಂಚಾಯಿತಿಯು ತಕ್ಷಣವೇ ಎಸ್ಸಿ-ಎಸ್ಟಿ ಕಾಲೋನಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪಿಡಿಓ ಅವರಿಗೆ ಸೂಚಿಸಿದರು. ಅಲ್ಲದೆ, ಗ್ರಾಮದ ಎಲ್ಲ ಕುಟುಂಬಗಳ ಸಮೀಕ್ಷೆ ನಡೆಸಿ ಶೌಚಾಲಯವಿಲ್ಲದ ಮನೆಗಳಿಂದ ಅರ್ಜಿಗಳನ್ನು ಪಡೆದು ಸರ್ಕಾರದ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದರು.

ಬಯಲು ಶೌಚದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳ ಕುರಿತು ಗ್ರಾಮ ಪಂಚಾಯಿತಿ ವತಿಯಿಂದ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆಯೂ ಸೂಚಿಸಿದ ಅವರು, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಪೊಲೀಸ್ ಇಲಾಖೆಗೆ ದೂರು ನೀಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನರಗುಂದ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್.ಬಿ. ಮಾಳಗೊಂಡ ಮಾತನಾಡಿ, ಸಮಾಜದ ಎಲ್ಲ ವರ್ಗದ ಜನರು ಪರಸ್ಪರ ಗೌರವ ಮತ್ತು ಸೌಹಾರ್ದತೆಯಿಂದ ಬದುಕಬೇಕು. ಎಸ್ಸಿ-ಎಸ್ಟಿ ಕಾಲೋನಿಗೆ ಒಂದು ನ್ಯಾಯ, ಇತರ ಪ್ರದೇಶಗಳಿಗೆ ಮತ್ತೊಂದು ನ್ಯಾಯ ಎಂಬ ಭಾವನೆಗೆ ಅವಕಾಶವಿಲ್ಲ. ಸ್ವಚ್ಛ ಪರಿಸರವೇ ಆರೋಗ್ಯಕರ ಸಮಾಜದ ಮೂಲಾಧಾರವಾಗಿದೆ ಎಂದರು.

ಜಗಾಪೂರದಲ್ಲಿ ನಡೆದಿರುವ ಘಟನೆ ಮರುಕಳಿಸದಂತೆ ಪೊಲೀಸ್ ಇಲಾಖೆ ವಾರಕ್ಕೆ ಎರಡು ಬಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಅಂಬೇಡ್ಕರ್ ಅವರ ಭಾವಚಿತ್ರದ ನಾಮಫಲಕದ ಸಮೀಪ ಅಶುಚಿತ್ವ ಉಂಟುಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಸಭೆಯಲ್ಲಿ ಹುಣಶಿಕಟ್ಟಿ ಗ್ರಾಮ ಪಂಚಾಯಿತಿ ಪಿಡಿಓ ಎಲ್.ಬಿ. ಕಲ್ಲಾಪೂರ, ಕಾರ್ಯದರ್ಶಿ ಕೆ.ಎನ್. ಹದಗಲ್, ಗ್ರಾಮಸ್ಥರಾದ ಶಿವಪ್ಪ ಗುಂಡಳ್ಳಿ, ನಿಂಗಪ್ಪ ಶಲವಡಿ, ಬಿ.ಎಸ್. ಕಾಮರಡ್ಡಿ ಹಾಗೂ ಎಸ್ಸಿ ಕಾಲೋನಿ ನಿವಾಸಿಗಳಾದ ಹನಮಪ್ಪ ಮಾದರ, ದೇವರಾಜ ಜೋಗಣ್ಣವರ, ಶ್ರೀಶೈಲ ಮೇಲಿನಮನಿ, ಮಾರುತಿ ಮೇಲಿನಮನಿ, ಬಸವರಾಜ ಹಳೇಮನಿ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande