ಕಾನೂನು ವಿದ್ಯಾರ್ಥಿಗಳಿಗೆ ಕ್ರೀಡೆ ಅತ್ಯಗತ್ಯ: ರಮೇಶ ಬಡ್ನೂರು
ವಿಜಯಪುರ, 05 ಜುಲೈ (ಹಿ.ಸ.) ಆ್ಯಂಕರ್ : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕರಾಕಾವಿವಿ) ವ್ಯಾಪ್ತಿಯ ವಿವಿಧ ಕಾನೂನು ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಅಂತರ್ ಕಾಲೇಜು ಅಥ್ಲೇಟಿಕ್ ಕ್ರೀಡಾಕೂಟವು ಉತ್ಸಾಹಭರಿತವಾಗಿ ನಡೆಯಿತು. ರಾಜ್ಯದ ನಾಲ್ಕು ವಿಭಾಗಗಳಿಂದ ಆಗಮಿಸಿದ್ದ ವ
ಸ್ಪೋರ್ಟ್ಸ್


ವಿಜಯಪುರ, 05 ಜುಲೈ (ಹಿ.ಸ.)

ಆ್ಯಂಕರ್ : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ (ಕರಾಕಾವಿವಿ) ವ್ಯಾಪ್ತಿಯ ವಿವಿಧ ಕಾನೂನು ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಅಂತರ್ ಕಾಲೇಜು ಅಥ್ಲೇಟಿಕ್ ಕ್ರೀಡಾಕೂಟವು ಉತ್ಸಾಹಭರಿತವಾಗಿ ನಡೆಯಿತು. ರಾಜ್ಯದ ನಾಲ್ಕು ವಿಭಾಗಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ವಿವಿಧ ಅಥ್ಲೇಟಿಕ್ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಬಾಗಲಕೋಟೆ ಕಾಂಗ್ರೆಸ್ ಮುಖಂಡ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ರಮೇಶ ಬಡ್ನೂರು ಮಾತನಾಡಿ, ಕಾನೂನು ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದೂ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅತ್ಯಗತ್ಯವಾಗಿದೆ ಎಂದು ಹೇಳಿದರು.

ಕ್ರೀಡೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ದೃಢತೆ, ಶಿಸ್ತು, ಸಮಯಪಾಲನೆ, ಆತ್ಮವಿಶ್ವಾಸ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ. ನ್ಯಾಯಾಂಗ ಹಾಗೂ ಕಾನೂನು ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಬೌದ್ಧಿಕ ಸಾಮರ್ಥ್ಯದ ಜೊತೆಗೆ ದೈಹಿಕ ಸಾಮರ್ಥ್ಯವೂ ಅಗತ್ಯವಾಗಿದ್ದು, ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಕ್ರೀಡೆಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮವನ್ನು ರೈಲ್ವೆ ಉದ್ಯೋಗಿ ಹಾಗೂ ರಾಷ್ಟ್ರೀಯ ಅಥ್ಲೀಟ್ ಅಶ್ವಿನಿ ಪುಜಾರ ಉದ್ಘಾಟಿಸಿ, ಕ್ರೀಡೆಯಲ್ಲಿ ಸಾಧನೆ ಮಾಡಲು ಪರಿಶ್ರಮ, ನಿರಂತರ ಅಭ್ಯಾಸ ಹಾಗೂ ಆತ್ಮವಿಶ್ವಾಸ ಅತ್ಯಂತ ಮುಖ್ಯವೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾ ಮನೋಭಾವದಿಂದ ಮುನ್ನಡೆಯುವಂತೆ ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಡೀನ್ ಶ್ರೀಮತಿ ರತ್ನಾ ಭರಮಗೌಡ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರಾಕಾವಿವಿ ರೆಜಿಸ್ಟ್ರಾರ್ ಶ್ರೀಮತಿ ಗೀತಾ ಕೌಲಗಿರ ಅವರು, ಕ್ರೀಡೆ ಮತ್ತು ಶಿಕ್ಷಣ ಎರಡೂ ವಿದ್ಯಾರ್ಥಿಗಳ ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿದ್ದು, ಇಂತಹ ಕ್ರೀಡಾಕೂಟಗಳು ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಉತ್ತೇಜಿಸುವ ಉತ್ತಮ ವೇದಿಕೆಗಳಾಗಿವೆ ಎಂದು ಹೇಳಿದರು.

ಈ ಕ್ರೀಡಾಕೂಟವನ್ನು ಕರಾಕಾವಿವಿ ದೈಹಿಕ ಶಿಕ್ಷಣ ನಿರ್ದೇಶಕ ಖಲೀದ್ ಖಾನ್ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ರಾಜ್ಯದ ನಾಲ್ಕು ಝೋನ್ಗಳ ವಿದ್ಯಾರ್ಥಿಗಳು ವಿವಿಧ ಅಥ್ಲೇಟಿಕ್ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡು ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳು, ವಿವಿಧ ಕಾನೂನು ಮಹಾವಿದ್ಯಾಲಯಗಳ ಪ್ರಾಂಶುಪಾಲರು, ಅಧ್ಯಾಪಕರು, ಕ್ರೀಡಾ ತರಬೇತುದಾರರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದು, ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು. ಕ್ರೀಡಾಕೂಟವು ಸ್ನೇಹ, ಸೌಹಾರ್ದತೆ ಹಾಗೂ ಆರೋಗ್ಯಕರ ಸ್ಪರ್ಧೆಯ ಸಂದೇಶ ಸಾರುವ ಮೂಲಕ ಯಶಸ್ವಿಯಾಗಿ ನೆರವೇರಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande