
ಬಾಗಲಕೋಟೆ, 05 ಜುಲೈ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ
ಮುಧೋಳ ತಾಲೂಕಿನ ಜೀವನಾಡಿಯಾಗಿರುವ ಘಟಪ್ರಭಾ ನದಿಗೆ ನಗರದ ಚರಂಡಿ ನೀರು ನೇರವಾಗಿ ಸೇರುತ್ತಿರುವುದು ಪರಿಸರ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಆತಂಕಕ್ಕೆ ಕಾರಣವಾಗಿದೆ.
ನಗರದ ಹೊರವಲಯದ ಯಾದವಾಡ ರಸ್ತೆ ಸಮೀಪದ ಸಿದ್ದರಾಮೇಶ್ವರ ನಗರ ಪ್ರದೇಶದ ಕೊಳಚೆ ನೀರು ಚರಂಡಿ ಮೂಲಕ ಯಾವುದೇ ಶುದ್ಧೀಕರಣವಿಲ್ಲದೆ ನದಿಗೆ ಹರಿಯುತ್ತಿರುವ ದೃಶ್ಯ ಸ್ಥಳೀಯರಲ್ಲಿ ಆಕ್ರೋಶ ಮೂಡಿಸಿದೆ.
ನದಿಯ ದಡದಲ್ಲಿ ಚರಂಡಿ ನೀರು ನಿರಂತರವಾಗಿ ಹರಿಯುತ್ತಿರುವುದರಿಂದ ದುರ್ವಾಸನೆ ವ್ಯಾಪಿಸಿದ್ದು, ನೀರಿನ ಮೇಲ್ಮೈಯಲ್ಲಿ ದಟ್ಟ ನೊರೆ ಕಾಣಿಸಿಕೊಳ್ಳುತ್ತಿದೆ. ಇದರಿಂದ ನದಿಯ ನೀರಿನ ಗುಣಮಟ್ಟ ಹದಗೆಡುತ್ತಿದ್ದು, ಜಲಚರಗಳ ಜೀವಕ್ಕೂ ಅಪಾಯ ಎದುರಾಗುವ ಸಾಧ್ಯತೆಯಿದೆ ಎಂದು ಪರಿಸರ ಪ್ರೇಮಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಘಟಪ್ರಭಾ ನದಿಯ ನೀರನ್ನು ಹಲವು ಗ್ರಾಮಗಳ ಜನರು ಕೃಷಿ, ಜಾನುವಾರುಗಳ ಬಳಕೆ ಹಾಗೂ ಇತರೆ ಅಗತ್ಯಗಳಿಗೆ ಅವಲಂಬಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೊಳಚೆ ನೀರು ನದಿಗೆ ಸೇರುತ್ತಿರುವುದು ಸಾಂಕ್ರಾಮಿಕ ರೋಗಗಳ ಹರಡುವಿಕೆಗೂ ಕಾರಣವಾಗಬಹುದು ಎಂಬ ಭೀತಿ ಸಾರ್ವಜನಿಕರಲ್ಲಿ ಮನೆ ಮಾಡಿದೆ.
ಸ್ಥಳೀಯ ನಿವಾಸಿಗಳು ಮತ್ತು ರೈತರು ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಚರಂಡಿ ನೀರು ನದಿಗೆ ಸೇರುವುದನ್ನು ಶಾಶ್ವತವಾಗಿ ತಡೆಯಬೇಕು ಎಂದು ಆಗ್ರಹಿಸಿದ್ದಾರೆ. ಕೊಳಚೆ ನೀರಿನ ಶುದ್ಧೀಕರಣ ಘಟಕದ ಮೂಲಕವೇ ನೀರನ್ನು ಹೊರಹರಿಸಬೇಕು ಹಾಗೂ ಪರಿಸರ ಸಂರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಮಳೆಗಾಲದಲ್ಲಿ ಚರಂಡಿ ನೀರಿನ ಹರಿವು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಮುನ್ನ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande