


ಬಳ್ಳಾರಿ, 05 ಜುಲೈ (ಹಿ.ಸ.)
ಆ್ಯಂಕರ್ : ಬರದಂತಹ ಕಠಿಣ ಪರಿಸ್ಥಿತಿಯಲ್ಲಿ ರೈತರು ಮತ್ತು ಸಾರ್ವಜನಿಕರು ಆರ್ಥಿಕ ಸಂಕಷ್ಟದ ಜೊತೆಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಯದಲ್ಲಿ ಸಾರ್ವಜನಿಕರು ವಿನಾಕಾರಣ ಖರ್ಚು-ವೆಚ್ಚ ಮಾಡದೆ, ತಮಗೆ ಲಭ್ಯವಿರುವ ಸರ್ಕಾರಿ ಆಸ್ಪತ್ರೆಗಳ ಉಚಿತ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ಅವರು ತಿಳಿಸಿದ್ದಾರೆ.
ಅವರು, ಜನರ ಆಸರೆಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಗ್ರಾಮ ಮಟ್ಟದಲ್ಲಿ ಹಲವು ವಿಶೇಷ ಮತ್ತು ಉಚಿತ ಆರೋಗ್ಯ ಸೇವೆಗಳನ್ನು ಹಮ್ಮಿಕೊಂಡಿದ್ದು, ಸಾರ್ವಜನಿಕರು ನಗರ ಪ್ರದೇಶಗಳಿಗೆ ಅಲೆಯುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
*ಗ್ರಾಮ ಮಟ್ಟದಲ್ಲೇ ವಿಶೇಷ ಆರೋಗ್ಯ ಶಿಬಿರಗಳು:*
ಬರದಂತಹ ಸ್ಥಿತಿ ಎದುರಿಸುವ ಹಳ್ಳಿಗಳ ಜನರು ಆಸ್ಪತ್ರೆಗಳಿಗೆ ಅಲೆಯುವುದನ್ನು ತಪ್ಪಿಸಲು ಆರೋಗ್ಯ ಇಲಾಖೆಯೇ ಹಳ್ಳಿಗಳ ಕಡೆಗೆ ಬರಲಿದೆ. ಗ್ರಾಮ ಮಟ್ಟದಲ್ಲಿ ಉಚಿತ ತಪಾಸಣಾ ಶಿಬಿರಗಳನ್ನು ನಡೆಸಿ ರಕ್ತದೊತ್ತಡ, ಮಧುಮೇಹ ಮತ್ತು ಕಣ್ಣಿನ ಉಚಿತ ತಪಾಸಣೆ ಮಾಡಿ, ಅಗತ್ಯ ಮಾತ್ರೆ ಹಾಗೂ ಕನ್ನಡಕಗಳನ್ನು ಉಚಿತವಾಗಿ ನೀಡಲಾಗುವುದು. ಆಸ್ಪತ್ರೆಗಳಿಲ್ಲದ ದೂರದ ಹಳ್ಳಿಗಳಿಗೆ ಸಂಚಾರಿ ಆರೋಗ್ಯ ಘಟಕಗಳು ಭೇಟಿ ನೀಡಿ ಪ್ರಾಥಮಿಕ ಚಿಕಿತ್ಸೆ ಒದಗಿಸಲಿವೆ.
*ಸಾಂಕ್ರಾಮಿಕ ರೋಗಗಳ ತಡೆ ಹಾಗೂ ಕುಡಿಯುವ ನೀರು ಪರೀಕ್ಷೆ:*
ಮಳೆ ಕೊರತೆಯ ಸಮಯದಲ್ಲಿ ನೀರಿನ ಅಭಾವದಿಂದ ಕಾಮಾಲೆ, ಕಾಲರಾ, ಟೈಫಾಯಿಡ್ ಮತ್ತು ಚರ್ಮರೋಗಗಳಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಸಮಸ್ಯೆಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಂಪೂರ್ಣ ಉಚಿತ ತಪಾಸಣೆ ಹಾಗೂ ಔಷಧಿ ನೀಡಲಾಗುವುದು. ಗ್ರಾಮೀಣ ಭಾಗದ ನೀರಿನ ಮೂಲಗಳಾದ ಬೋರ್ವೆಲ್ ಹಾಗೂ ಟ್ಯಾಂಕರ್ ನೀರನ್ನು ನಿಯಮಿತವಾಗಿ ಕ್ಲೋರಿನೇಷನ್ ಮಾಡಲು ಮತ್ತು ನೀರಿನ ಗುಣಮಟ್ಟವನ್ನು ಉಚಿತವಾಗಿ ಜೈವಿಕ ಪರೀಕ್ಷೆ ಮಾಡಲು ಇಲಾಖೆ ಕ್ರಮ ಕೈಗೊಂಡಿದೆ.
*ಗರ್ಭಿಣಿಯರು, ಬಾಣಂತಿಯರು ಮತ್ತು ಮಕ್ಕಳಿಗೆ ಪೌಷ್ಟಿಕಾಂಶ:*
ಆರ್ಥಿಕ ಮುಗ್ಗಟ್ಟಿನಿಂದಾಗಿ ಮಹಿಳೆಯರು ಮತ್ತು ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಕಾಡದಂತೆ ತಡೆಯಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ವಿಶೇಷ ಸೇವೆ ನೀಡಲಾಗುತ್ತಿದೆ. ಗರ್ಭಿಣಿ ಮತ್ತು ಬಾಣಂತಿಯರಿಗೆ ರಕ್ತಹೀನತೆ ತಡೆಯಲು ಕಬ್ಬಿಣದಂಶ ಹಾಗೂ ಫೋಲಿಕ್ ಆಸಿಡ್ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುವುದು. ಅಪೌಷ್ಟಿಕತೆಯಿಂದ ಬಳಲುವ ಮಕ್ಕಳನ್ನು ಗುರುತಿಸಿ ಅವರಿಗೆ ಉಚಿತ ಪೌಷ್ಟಿಕ ಆಹಾರದ ಕಿಟ್ಗಳು ಮತ್ತು ಚಿಕಿತ್ಸೆ ನೀಡಲಾಗುತ್ತದೆ.
*ಉಚಿತ ತುರ್ತು ಸೇವೆ ಹಾಗೂ ರೂ.5 ಲಕ್ಷದವರೆಗೆ ಆರೋಗ್ಯ ವಿಮೆ:*
ಆಯುಷ್ಮಾನ್ ಭಾರತ್ - ಆರೋಗ್ಯ ಕರ್ನಾಟಕ ಯೋಜನೆಯಡಿ ಬರಗಾಲದ ಸಮಯದಲ್ಲಿ ಬರುವ ಯಾವುದೇ ದೊಡ್ಡ ಕಾಯಿಲೆ ಅಥವಾ ಶಸ್ತçಚಿಕಿತ್ಸೆಗೆ ನೋಂದಾಯಿತ ಆಸ್ಪತ್ರೆಗಳಲ್ಲಿ ರೈತರಿಗೆ ಹಾಗೂ ಕೂಲಿ ಕಾರ್ಮಿಕ ಕುಟುಂಬಗಳಿಗೆ ವರ್ಷಕ್ಕೆ ರೂ.5 ಲಕ್ಷದವರೆಗೆ ಸಂಪೂರ್ಣ ಉಚಿತ ನಗದು ರಹಿತ ಚಿಕಿತ್ಸೆ ಸಿಗಲಿದೆ. ಯಾವುದೇ ತುರ್ತು ಆರೋಗ್ಯ ಸಮಸ್ಯೆಯ ಸಂದರ್ಭದಲ್ಲಿ ರೋಗಿಗಳನ್ನು ಉಚಿತವಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲು 108 ಆಂಬ್ಯುಲೆನ್ಸ್ ಸೇವೆ ಸದಾ ಲಭ್ಯವಿರುತ್ತದೆ.
*ರೈತರ ಮಾನಸಿಕ ಒತ್ತಡ ನಿವಾರಣೆಗೆ ಉಚಿತ ಆಪ್ತಸಮಾಲೋಚನೆ:*
ಬೆಳೆ ನಷ್ಟ ಮತ್ತು ಸಾಲದ ಸುಳಿಗೆ ಸಿಲುಕಿ ರೈತರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುವುದನ್ನು ತಡೆಯಲು ಇಲಾಖೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ‘ಮನೋಚೈತನ್ಯ' ಯೋಜನೆಯಡಿ ತಾಲ್ಲೂಕು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಟ್ಟದಲ್ಲಿ ರೈತರಿಗಾಗಿ ಉಚಿತ ಮಾನಸಿಕ ಸಮಾಲೋಚನೆ ಶಿಬಿರಗಳನ್ನು ನಡೆಸಿ, ಮಾನಸಿಕ ತಜ್ಞರಿಂದ ಧೈರ್ಯ ತುಂಬುವ ಕೆಲಸ ಮಾಡಲಾಗುವುದು.
ಟೆಲಿ-ಮನಸ್ ಕಾರ್ಯಕ್ರಮದಡಿ ರೈತರು ತಮಗಾಗುವ ತೀವ್ರ ಮಾನಸಿಕ ಒತ್ತಡ ಅಥವಾ ಖಿನ್ನತೆಯ ಸಮಯದಲ್ಲಿ 14416 ಸಂಖ್ಯೆಗೆ ಕರೆ ಮಾಡಿ ದಿನದ 24 ಗಂಟೆಯೂ ಉಚಿತವಾಗಿ ತಜ್ಞರಿಂದ ಆಪ್ತಸಮಾಲೋಚನೆ ಮತ್ತು ಮಾರ್ಗದರ್ಶನ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.
ಗ್ರಾಮಕ್ಕೆ ಬರುವ ಆಶಾ ಕಾರ್ಯಕರ್ತೆಯರು ಅಥವಾ ಆರೋಗ್ಯ ಕ್ಷೇಮ ಕೇಂದ್ರದ ಸಿಬ್ಬಂದಿಯನ್ನು ಸಂಪರ್ಕಿಸಿ ಈ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಯಾವುದೇ ಆರೋಗ್ಯ ನೆರವಿಗಾಗಿ ಇಲಾಖೆಯ ಸಹಾಯವಾಣಿ ಸಂಖ್ಯೆ 7353183474 ಗೆ ಕರೆ ಮಾಡಬಹುದು ಎಂದು ಡಿ.ಹೆಚ್.ಓ ಡಾ. ಯಲ್ಲಾ ರಮೇಶ್ ಬಾಬು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್