ಜಮಖಂಡಿ ವೀರ ಸಿಂಧೂರ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ: ಮಳೆಯಿಂದ ತರಕಾರಿ ಕೊಚ್ಚಿಹೋಗಿ ವ್ಯಾಪಾರಿಗಳಿಗೆ ಭಾರೀ ನಷ್ಟ, ಪ್ರತಿಭಟನೆ
ಬಾಗಲಕೋಟೆ, 05 ಜುಲೈ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ಪಟ್ಟಣದ ವೀರ ಸಿಂಧೂರ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ತರಕಾರಿ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವ್ಯಾಪಾರ ನಡೆಸುವುದೇ ದುಸ್ತರವಾಗಿದೆ ಎಂದು ವ್ಯಾಪಾರಿಗ
ಪ್ರೊಟೆಸ್ಟ್


ಬಾಗಲಕೋಟೆ, 05 ಜುಲೈ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ

ಜಮಖಂಡಿ ಪಟ್ಟಣದ ವೀರ ಸಿಂಧೂರ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ತರಕಾರಿ ವ್ಯಾಪಾರಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವ್ಯಾಪಾರ ನಡೆಸುವುದೇ ದುಸ್ತರವಾಗಿದೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಮಾರುಕಟ್ಟೆಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ, ಮಳೆ ನೀರು ಹರಿದು ಹೋಗಲು ಸೂಕ್ತ ವ್ಯವಸ್ಥೆ ಹಾಗೂ ಶೆಡ್ಗಳ ಕೊರತೆಯಿಂದ ಮಳೆ ನೀರು ಅಂಗಡಿಗಳೊಳಗೆ ನುಗ್ಗಿ ಮಾರಾಟಕ್ಕೆ ತಂದಿದ್ದ ತರಕಾರಿ ಮತ್ತು ಇತರೆ ಕೃಷಿ ಉತ್ಪನ್ನಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿವೆ.

ಇದರಿಂದ ಪ್ರತಿದಿನ ಸಾವಿರಾರು ರೂಪಾಯಿ ನಷ್ಟವಾಗುತ್ತಿದ್ದು, ಜೀವನೋಪಾಯವೇ ಸಂಕಷ್ಟಕ್ಕೆ ಸಿಲುಕಿದೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡರು.

ಈ ಸಮಸ್ಯೆಯನ್ನು ಹಲವು ಬಾರಿ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಶಾಶ್ವತ ಪರಿಹಾರ ಕಲ್ಪಿಸಿಲ್ಲ ಎಂದು ಆರೋಪಿಸಿದ ವ್ಯಾಪಾರಿಗಳು, ನ್ಯಾಯಕ್ಕಾಗಿ ನಗರಸಭೆ ಹಾಗೂ ಪೊಲೀಸ್ ಅಧಿಕಾರಿಗಳ ಮೊರೆ ಹೋದರು. ಬಳಿಕ ಮಾರುಕಟ್ಟೆ ಆವರಣದಲ್ಲಿ ಪ್ರತಿಭಟನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾಕಾರರು ಮಾತನಾಡಿ, ಮಳೆ ಬಂದಾಗ ವ್ಯಾಪಾರ ಮಾಡುವುದು ಅಸಾಧ್ಯವಾಗುತ್ತಿದೆ. ನಮ್ಮ ಶ್ರಮದ ಫಲವಾದ ತರಕಾರಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ. ಇದರಿಂದ ಕುಟುಂಬ ನಿರ್ವಹಣೆಯೇ ಕಷ್ಟವಾಗಿದೆ. ಕೂಡಲೇ ಮಾರುಕಟ್ಟೆಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ, ಮಳೆ ನೀರು ನಿಲ್ಲದಂತೆ ಚರಂಡಿ ವ್ಯವಸ್ಥೆ ಹಾಗೂ ಶಾಶ್ವತ ಶೆಡ್ ನಿರ್ಮಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಗರಸಭೆ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ವ್ಯಾಪಾರಿಗಳು ಆಗ್ರಹಿಸಿದರು.

ಪ್ರತಿಭಟನೆಯ ವೇಳೆ ಅನೇಕ ವ್ಯಾಪಾರಿಗಳು ಭಾಗವಹಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಮಾರುಕಟ್ಟೆಯ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿದ್ದು, ಶೀಘ್ರದಲ್ಲೇ ಸಮಸ್ಯೆ ಬಗೆಹರಿಸಬೇಕೆಂಬ ಒತ್ತಾಯ ಕೇಳಿಬಂತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande