ಆತ್ಮ ಯೋಜನೆಯಡಿ ಬಿಟಿಎಂ, ಎಟಿಎಂ ಹುದ್ದೆಗಳಿಗೆ ಅರ್ಜಿ ಆಹ್ವಾನ
ಗದಗ, 05 ಜುಲೈ (ಹಿ.ಸ.) ಆ್ಯಂಕರ್:- ಕೃಷೋನ್ನತಿ–ಕೃಷಿ ವಿಸ್ತರಣೆ (ಆತ್ಮ) ಯೋಜನೆಯಡಿ 2026-27ನೇ ಸಾಲಿನಲ್ಲಿ ಹೊಸದಾಗಿ ರಚನೆಯಾಗಿರುವ ತಾಲೂಕುಗಳಲ್ಲಿ ನೇರಗುತ್ತಿಗೆ ಆಧಾರದ ಮೇಲೆ ತಾಲೂಕು ತಾಂತ್ರಿಕ ವ್ಯವಸ್ಥಾಪಕ (ಬಿಟಿಎಂ) ಎರಡು ಹುದ್ದೆಗಳು ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕ (ಎಟಿಎಂ) ಒಂದು ಹುದ್
ಫೋಟೋ


ಗದಗ, 05 ಜುಲೈ (ಹಿ.ಸ.)

ಆ್ಯಂಕರ್:- ಕೃಷೋನ್ನತಿ–ಕೃಷಿ ವಿಸ್ತರಣೆ (ಆತ್ಮ) ಯೋಜನೆಯಡಿ 2026-27ನೇ ಸಾಲಿನಲ್ಲಿ ಹೊಸದಾಗಿ ರಚನೆಯಾಗಿರುವ ತಾಲೂಕುಗಳಲ್ಲಿ ನೇರಗುತ್ತಿಗೆ ಆಧಾರದ ಮೇಲೆ ತಾಲೂಕು ತಾಂತ್ರಿಕ ವ್ಯವಸ್ಥಾಪಕ (ಬಿಟಿಎಂ) ಎರಡು ಹುದ್ದೆಗಳು ಹಾಗೂ ಸಹಾಯಕ ತಾಂತ್ರಿಕ ವ್ಯವಸ್ಥಾಪಕ (ಎಟಿಎಂ) ಒಂದು ಹುದ್ದೆ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ 6 ಕೊನೆಯ ದಿನವಾಗಿದೆ.

ತಾಲೂಕು ತಾಂತ್ರಿಕ ವ್ಯವಸ್ಥಾಪಕ (ಬಿಟಿಎಂ) ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಜೊತೆಗೆ ಗಣಕಯಂತ್ರ ಜ್ಞಾನ ಹೊಂದಿದ್ದು, ಕೃಷಿ ಅಥವಾ ಕೃಷಿ ಸಂಬಂಧಿತ ಇಲಾಖೆಯಲ್ಲಿ ಕನಿಷ್ಠ ಎರಡು ವರ್ಷಗಳ ಸೇವಾನುಭವ ಹೊಂದಿರಬೇಕು. ಪರ್ಯಾಯವಾಗಿ ಕನಿಷ್ಠ ಐದು ವರ್ಷಗಳ ಕಾಲ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾಗಿ (ಎಟಿಎಂ) ಕಾರ್ಯನಿರ್ವಹಿಸಿರುವ ಅನುಭವವಿದ್ದರೂ ಅರ್ಜಿ ಸಲ್ಲಿಸಲು ಅವಕಾಶವಿದೆ.

ಸಹಾಯಕ ತಾಂತ್ರಿಕ ವ್ಯವಸ್ಥಾಪಕ (ಎಟಿಎಂ) ಹುದ್ದೆಗೆ ಕೃಷಿ ಅಥವಾ ಕೃಷಿ ಸಂಬಂಧಿತ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕೃಷಿ ಹಾಗೂ ಸಂಬಂಧಿತ ಇಲಾಖೆಯಲ್ಲಿ ಕನಿಷ್ಠ ಒಂದು ವರ್ಷದ ಸೇವಾನುಭವ ಹೊಂದಿರುವುದು ಕಡ್ಡಾಯವಾಗಿದೆ.

ಆಸಕ್ತ ಅಭ್ಯರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಇತ್ತೀಚಿನ ಭಾವಚಿತ್ರ, ವಿದ್ಯಾರ್ಹತಾ ಪ್ರಮಾಣಪತ್ರಗಳು, ಆಧಾರ್ ಕಾರ್ಡ್ ಪ್ರತಿ ಹಾಗೂ ಇತರೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಹುಡ್ಕೊ ಕಾಲೋನಿ, ನೌಕರ ಭವನ ಹತ್ತಿರ, ಮುಳಗುಂದ ರಸ್ತೆ, ಗದಗ–582103 ವಿಳಾಸಕ್ಕೆ ಸಲ್ಲಿಸಬೇಕು.

ಹುದ್ದೆಗಳ ಆಯ್ಕೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ 8217773915 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಅಲ್ಲದೇ ಆತ್ಮ ಯೋಜನೆಯ ಉಪ ಯೋಜನಾ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಪಡೆಯಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಕ್ಷೇತ್ರದಲ್ಲಿ ತಾಂತ್ರಿಕ ಸೇವೆ ಸಲ್ಲಿಸಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವಂತೆ ಕೃಷಿ ಇಲಾಖೆ ಮನವಿ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande