
ಬೆಂಗಳೂರು, 05 ಜುಲೈ (ಹಿ.ಸ.):
ಆ್ಯಂಕರ್:ಬೆಂಗಳೂರು ನಗರದ ಕೆರೆಗಳ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಮುಖ್ಯ ಅಭಿಯಂತರೆ ಹೇಮಲತಾ ಅವರು ಇಂದು ಸಿ.ವಿ.ರಾಮನ್ ನಗರ ವಿಭಾಗದ ಕಗ್ಗದಾಸಪುರ ಕೆರೆಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಕಾರ್ಯಪಾಲಕ ಅಭಿಯಂತರರೊಂದಿಗೆ ಕೆರೆಗೆ ಭೇಟಿ ನೀಡಿದ ಅವರು, ಕೆರೆಯ ಸ್ವಚ್ಛತೆ, ನಿರ್ವಹಣೆ, ಪರಿಸರ ಸಂರಕ್ಷಣೆ ಹಾಗೂ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು. ಕೆರೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ಕಾಮಗಾರಿಗಳ ಸ್ಥಿತಿಗತಿಗಳನ್ನು ಅವಲೋಕಿಸಿದ ಅಧಿಕಾರಿಗಳು, ಅಗತ್ಯ ನಿರ್ವಹಣಾ ಕ್ರಮಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರಿಶೀಲನೆ ವೇಳೆ ಕೆರೆಯ ಪರಿಸರವನ್ನು ಇನ್ನಷ್ಟು ಸುಧಾರಿಸುವುದು, ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಹಾಗೂ ನಿರ್ವಹಣಾ ಕಾರ್ಯಗಳನ್ನು ನಿಯಮಿತವಾಗಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ನಗರದ ಕೆರೆಗಳನ್ನು ಸಂರಕ್ಷಿಸುವುದು, ಪರಿಸರ ಸಮತೋಲನ ಕಾಪಾಡುವುದು ಹಾಗೂ ಸಾರ್ವಜನಿಕರಿಗೆ ಉತ್ತಮ ಪರಿಸರ ಒದಗಿಸುವ ನಿಟ್ಟಿನಲ್ಲಿ ಬೆಂಗಳೂರು ಕೇಂದ್ರ ನಗರ ಪಾಲಿಕೆ ನಿರಂತರವಾಗಿ ಬದ್ಧವಾಗಿದ್ದು, ಈ ದಿಸೆಯಲ್ಲಿ ಅಗತ್ಯ ಕ್ರಮಗಳನ್ನು ಮುಂದುವರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.