
ಬೆಂಗಳೂರು, 05 ಜುಲೈ (ಹಿ.ಸ.):
ಆ್ಯಂಕರ್:ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಸೇರಿದಂತೆ ಕಾಡಂಚಿನ ಪ್ರದೇಶಗಳಲ್ಲಿ ವಾಸಿಸುವ ಸೋಲಿಗ ಬುಡಕಟ್ಟು ಸಮುದಾಯಕ್ಕೆ ನೀಡಬೇಕಿದ್ದ ಪೌಷ್ಟಿಕ ಆಹಾರ ಕಿಟ್‌ಗಳ ವಿತರಣೆ ಕಳೆದ ಮೂರು ತಿಂಗಳಿಂದ ಸ್ಥಗಿತಗೊಂಡಿದೆ ಎಂದು ಆರೋಪಿಸಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ, ಅನ್ನದ ಭದ್ರತೆ ನೀಡುತ್ತೇವೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಇಂದು ಸೋಲಿಗ ಬುಡಕಟ್ಟು ಸಮುದಾಯದ ಹೊಟ್ಟೆಗೆ ಹೊಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ ಸೇರಿದಂತೆ ಕಾಡಂಚಿನ ಪ್ರದೇಶಗಳಲ್ಲಿ ವಾಸಿಸುವ ಸೋಲಿಗರಿಗೆ ಸರ್ಕಾರದಿಂದ ದೊರೆಯಬೇಕಿದ್ದ ಪೌಷ್ಟಿಕ ಆಹಾರ ಕಿಟ್‌ಗಳು ಮೂರು ತಿಂಗಳಿಂದ ತಲುಪಿಲ್ಲ ಎಂಬ ವರದಿಗಳು ಸರ್ಕಾರದ ಆಡಳಿತ ವೈಫಲ್ಯವನ್ನು ಬಯಲಿಗೆಳೆಯುತ್ತವೆ ಎಂದು ಅವರು ಆರೋಪಿಸಿದ್ದಾರೆ.
ಒಂದೆಡೆ ಬರ ಪರಿಸ್ಥಿತಿ, ಮತ್ತೊಂದೆಡೆ ಉದ್ಯೋಗದ ಕೊರತೆ ನಡುವೆ ಸರ್ಕಾರದ ನಿರ್ಲಕ್ಷ್ಯದಿಂದ ಬುಡಕಟ್ಟು ಸಮುದಾಯಕ್ಕೆ ಪೌಷ್ಟಿಕ ಆಹಾರವೂ ಸಿಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹಲವು ಕುಟುಂಬಗಳು ಕೂಲಿ ಅರಸಿ ವಲಸೆ ಹೋಗುತ್ತಿದ್ದು, ಮಕ್ಕಳು ಶಾಲೆ ತೊರೆಯುವ ಪರಿಸ್ಥಿತಿ ಎದುರಾಗಿದೆ. ಅಪೌಷ್ಟಿಕತೆ ಹೆಚ್ಚಾಗುತ್ತಿದ್ದು, ಬುಡಕಟ್ಟು ಜನರ ಬದುಕು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದು ಅಶೋಕ್ ಹೇಳಿದ್ದಾರೆ.
ಮುಖ್ಯಮಂತ್ರಿಗಳಿಗೆ ರಾಜಕೀಯ ಪ್ರಚಾರ, ಜಾಹೀರಾತು ಮತ್ತು ಅಧಿಕಾರದ ಪ್ರದರ್ಶನಕ್ಕೆ ಸಮಯವಿದೆ. ಆದರೆ ಕಾಡಂಚಿನ ಬಡವರು, ಬುಡಕಟ್ಟು ಜನರು, ಮಹಿಳೆಯರು ಹಾಗೂ ಮಕ್ಕಳ ಬದುಕಿನ ಬಗ್ಗೆ ಕಾಳಜಿಯಿಲ್ಲವೇ ಎಂದು ಪ್ರಶ್ನಿಸಿರುವ ಅವರು, ರಾಜ್ಯದ ಅತ್ಯಂತ ದುರ್ಬಲ ವರ್ಗದ ಜನರಿಗೆ ಸಮಯಕ್ಕೆ ಪೌಷ್ಟಿಕ ಆಹಾರ ತಲುಪಿಸಲು ವಿಫಲವಾದ ಸರ್ಕಾರ ಅಭಿವೃದ್ಧಿಯ ಬಗ್ಗೆ ಮಾತನಾಡುವುದು ಕೇವಲ ಬೂಟಾಟಿಕೆ ಎಂದು ಟೀಕಿಸಿದ್ದಾರೆ.
ಗ್ಯಾರಂಟಿಗಳ ಹೆಸರಿನಲ್ಲಿ ಪ್ರಚಾರ ಮಾಡಿಕೊಳ್ಳುತ್ತಿರುವ ಸರ್ಕಾರ, ಮೂಲಭೂತ ಪೌಷ್ಟಿಕ ಆಹಾರವನ್ನೂ ಬುಡಕಟ್ಟು ಸಮುದಾಯಕ್ಕೆ ತಲುಪಿಸಲು ವಿಫಲವಾಗಿದೆ. ಈ ಆಡಳಿತ ವೈಫಲ್ಯಕ್ಕೆ ಮುಖ್ಯಮಂತ್ರಿಗಳೇ ನೇರ ಹೊಣೆ ಹೊರಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಳೆದ ಮೂರು ತಿಂಗಳ ಬಾಕಿ ಉಳಿದಿರುವ ಎಲ್ಲಾ ಪೌಷ್ಟಿಕ ಆಹಾರ ಕಿಟ್‌ಗಳನ್ನು ತಕ್ಷಣ ವಿತರಿಸಿ, ಸೋಲಿಗ ಬುಡಕಟ್ಟು ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆರ್. ಅಶೋಕ್ ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.