ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕ್ಷಮೆ ಕೇಳಬೇಕು: ಎಚ್.ಕೆ. ಪಾಟೀಲ
ಗದಗ, 05 ಜುಲೈ (ಹಿ.ಸ.) ಆ್ಯಂಕರ್:- ನನಗೆ ಮೂರು ಮತಗಳಿವೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಸಂಪೂರ್ಣ ಹಸಿ ಸುಳ್ಳು. ಈ ಆರೋಪದಿಂದ ನನ್ನ ನಾಲ್ಕು ದಶಕಗಳ ರಾಜಕೀಯ ಜೀವನಕ್ಕೆ ಮಸಿ ಬಳಿಯುವ ಪ್ರಯತ್ನ ನಡೆದಿದೆ. ಆದ್ದರಿಂದ ಬೊಮ್ಮಾಯಿ ಅವರು ಸಾರ್ವಜನಿಕವಾಗಿ ಕ್ಷಮೆ
ಫೋಟೋ


ಗದಗ, 05 ಜುಲೈ (ಹಿ.ಸ.)

ಆ್ಯಂಕರ್:- ನನಗೆ ಮೂರು ಮತಗಳಿವೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಸಂಪೂರ್ಣ ಹಸಿ ಸುಳ್ಳು. ಈ ಆರೋಪದಿಂದ ನನ್ನ ನಾಲ್ಕು ದಶಕಗಳ ರಾಜಕೀಯ ಜೀವನಕ್ಕೆ ಮಸಿ ಬಳಿಯುವ ಪ್ರಯತ್ನ ನಡೆದಿದೆ. ಆದ್ದರಿಂದ ಬೊಮ್ಮಾಯಿ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಮಾಜಿ ಸಚಿವ ಹಾಗೂ ಗದಗ ಶಾಸಕ ಎಚ್.ಕೆ. ಪಾಟೀಲ ಆಗ್ರಹಿಸಿದರು.

ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುಭವಿ ಹಾಗೂ ಬುದ್ಧಿವಂತ ರಾಜಕಾರಣಿ. ರಾಜಕೀಯದ ಸೂಕ್ಷ್ಮತೆಗಳನ್ನು ಅರಿತಿರುವ ವ್ಯಕ್ತಿಯಾಗಿರುವ ಅವರು ಯಾವುದೇ ಆರೋಪ ಮಾಡುವ ಮುನ್ನ ಸತ್ಯಾಸತ್ಯತೆಗಳನ್ನು ಪರಿಶೀಲಿಸಬೇಕಾಗಿತ್ತು. ಆದರೆ ಅವಸರದಲ್ಲಿ ಪರಿಶೀಲಿಸದೆ ಆಧಾರರಹಿತ ಆರೋಪ ಮಾಡಿರುವುದು ಅತ್ಯಂತ ಬೇಸರದ ಸಂಗತಿ ಎಂದು ಹೇಳಿದರು.

ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಆದರೆ ವೈಯಕ್ತಿಕ ಚಾರಿತ್ರ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಆರೋಪ ಮಾಡುವುದು ಸರಿಯಲ್ಲ. ದುರುದ್ದೇಶದಿಂದ ಕೂಡಿದ ಇಂತಹ ಹೇಳಿಕೆಗಳು ಆರೋಗ್ಯಕರ ರಾಜಕೀಯ ಸಂಸ್ಕೃತಿಗೆ ವಿರುದ್ಧವಾಗಿದ್ದು, ಬೊಮ್ಮಾಯಿ ಅವರಂತಹ ಹಿರಿಯ ನಾಯಕರಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ ಎಂದು ಹೇಳಿದರು.

ಹುಲಕೋಟಿ ಗ್ರಾಮದಲ್ಲಿ ಎಚ್.ಕೆ. ಪಾಟೀಲ ಹೆಸರಿನಲ್ಲಿ ಮೂರು ಮತಗಳಿವೆ ಎಂದು ಬೊಮ್ಮಾಯಿ ಆರೋಪಿಸಿರುವುದನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಅವರು, ಹುಲಕೋಟಿಯಲ್ಲಿ ಎಚ್.ಕೆ. ಪಾಟೀಲ ಹೆಸರಿನ ಇಬ್ಬರು ಮತದಾರರಿದ್ದಾರೆ. ಅವರಲ್ಲಿ ಒಬ್ಬರು ನನ್ನ ಸಂಬಂಧಿಕರು. ಮತದಾರರ ಪಟ್ಟಿಯಲ್ಲಿ ಅವರ ಹೆಸರೂ ಎಚ್.ಕೆ. ಪಾಟೀಲ ಎಂದೇ ದಾಖಲಾಗಿದೆ. ಇದನ್ನು ಪರಿಶೀಲಿಸದೇ ನನ್ನ ವಿರುದ್ಧ ಆರೋಪ ಮಾಡಿರುವುದು ದುರದೃಷ್ಟಕರ ಎಂದು ತಿಳಿಸಿದರು.

ಕಳೆದ 40 ವರ್ಷಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿದ್ದೇನೆ. ಗದಗ ಜಿಲ್ಲೆಯ ಜನರು ನನ್ನ ರಾಜಕೀಯ ಜೀವನ, ಸಾರ್ವಜನಿಕ ಸೇವೆ ಹಾಗೂ ನಡವಳಿಕೆಯನ್ನು ಹತ್ತಿರದಿಂದ ನೋಡಿದ್ದಾರೆ. ಇಂತಹ ಸಂದರ್ಭದಲ್ಲಿ ನನ್ನ ಹೆಸರನ್ನು ಉಲ್ಲೇಖಿಸಿ ಸುಳ್ಳು ಆರೋಪ ಮಾಡುವುದು ನನ್ನ ವೈಯಕ್ತಿಕ ಗೌರವಕ್ಕೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿಯಾಗಿ ರಾಜ್ಯದ ಉನ್ನತ ಹುದ್ದೆಯನ್ನು ಅಲಂಕರಿಸಿರುವ ಬಸವರಾಜ ಬೊಮ್ಮಾಯಿ ಅವರು ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿತ್ತು. ಯಾವುದೇ ಮಾಹಿತಿ ಇಲ್ಲದೆ ಆರೋಪ ಮಾಡುವುದು ಅವರ ವ್ಯಕ್ತಿತ್ವಕ್ಕೂ ಶೋಭೆ ತರುವುದಿಲ್ಲ. ಇಂತಹ ಹೇಳಿಕೆಗಳಿಂದ ಅವರ ಸಾರ್ವಜನಿಕ ಘನತೆಗೆ ಕೂಡ ಧಕ್ಕೆಯಾಗುತ್ತದೆ ಎಂದು ಎಚ್.ಕೆ. ಪಾಟೀಲ ಅಭಿಪ್ರಾಯಪಟ್ಟರು.

ನನ್ನ ವಿರುದ್ಧ ಮಾಡಿರುವ ಆರೋಪ ಸಂಪೂರ್ಣವಾಗಿ ಆಧಾರರಹಿತವಾಗಿದೆ. ವಾಸ್ತವಾಂಶವನ್ನು ತಿಳಿದುಕೊಂಡ ಬಳಿಕವೂ ತಪ್ಪು ಮಾಹಿತಿಯನ್ನು ಪ್ರಸಾರ ಮಾಡುವುದು ಸರಿಯಲ್ಲ. ಆದ್ದರಿಂದ ಬಸವರಾಜ ಬೊಮ್ಮಾಯಿ ಅವರು ತಾವು ಮಾಡಿದ ಆರೋಪಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಎಚ್.ಕೆ. ಪಾಟೀಲ ಒತ್ತಾಯಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande