
ಕೊಪ್ಪಳ, 05 ಜುಲೈ (ಹಿ.ಸ.)
ಆ್ಯಂಕರ್ : ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026ರ ಕಾರ್ಯವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ವಸತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಕೆ.ಪಿ.ಮೋಹನ್ ರಾಜ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026ರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಬಿಎಲ್ಒ ಗಳು ಕಡ್ಡಾಯ ಮನೆಮನೆಗೆ ಭೇಟಿ ನೀಡಿ ನಿಯಮಾನುಸಾರ ಗಣತಿ ನಮೂನೆ ಭರ್ತಿ ಮಾಡಲು ಮತದಾರರಿಗೆ ಸಹಾಯ ಮಾಡಬೇಕು. ನಿಗದಿತ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಬೇಕು. ಕನಿಷ್ಠ 4 ದಿನಕ್ಕೊಮ್ಮೆ ಬಿಎಲ್ಒ ಗಳು ಅವರ ಸೂಪರ್ವೈಸರ್ಗಳ ಜೊತೆ ಜೂಮ್ ಮೀಟಿಂಗ್ ಮೂಲಕ ಪ್ರಗತಿ ವರದಿ, ಮನೆ ಭೇಟಿ ಸಂದರ್ಭ ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿಸಬಹುದು. ಈ ಮೂಲಕ ಬಿಎಲ್ಒ ಗಳ ದೂರು, ಸಮಸ್ಯೆ ಪರಿಹರಿಸಲು ಅನುಕೂಲವಾಗುತ್ತದೆ. ಹಾಗೆಯೇ ಹಂತ ಹಂತವಾಗಿ ಪರಿಷ್ಕರಣೆ ಕಾರ್ಯದ ನಿಯೋಜಿತ ಅಧಿಕಾರಿಗಳು ಆನ್ಲೈನ್ ಮೀಟಿಂಗ್ ಮೂಲಕ ಪ್ರಗತಿ ವರದಿಯನ್ನು ಪರಿಶೀಲಿಸಬೇಕು. ಜಿಲ್ಲೆಯಿಂದ ವಲಸೆ ಹೋದ, ಮರಣ ಹೊಂದಿದ, ಎರಡು ಕಡೆ ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಪತ್ತೆ ಮಾಡಿ ಸರಿಪಡಿಸಬೇಕು ಎಂದು ತಿಳಿಸಿದರು.
2025ರ ಜನವರಿ 6ರ ಅಂತಿಮ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ 11,85,489 ಮತದಾರರಿದ್ದು, 2026ರ ಜೂನ್ 16ರಂತೆ ಮತದಾರರ ಸಂಖ್ಯೆ 11,90,214 ರಷ್ಟಿದೆ. ಜಿಲ್ಲೆಯಲ್ಲಿ ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 ಕಾರ್ಯ ಪ್ರಗತಿಯಲ್ಲಿದೆ. ಇದಕ್ಕಾಗಿ ಜಿಲ್ಲಾಮಟ್ಟದ 5 ಅಧಿಕಾರಿಗಳನ್ನು ಇಆರ್ಒ ಗಳಾಗಿ, ತಾಲ್ಲೂಕು ಮಟ್ಟದ 7 ಅಧಿಕಾರಿಗಳನ್ನು ಎಇಆರ್ಒ ಗಳಾಗಿ ನೇಮಕ ಮಾಡಲಾಗಿದೆ. ಒಟ್ಟು 1315 ಬಿಎಲ್ಒ ಗಳನ್ನು ಹಾಗೂ 155 ಬಿಎಲ್ಒ ಸೂಪರ್ವೈರ್ಸ್ ಗಳನ್ನು, 117 ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿ ಜುಲೈ 4ರ ಬೆಳಿಗ್ಗೆ 10 ಗಂಟೆಗೆ ಒಟ್ಟು 9,23,948 ಗಣತಿ ನಮೂನೆಗಳನ್ನು ವಿತರಿಸಲಾಗಿದೆ. ಈ ಮೂಲಕ ಶೇ.77.63 ರಷ್ಟು ಪ್ರಗತಿ ಸಾಧಿಸಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಸುರೇಶ ಬಿ.ಇಟ್ನಾಳ ಅವರು ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಮಹಮ್ಮದ್ ಜೀಲಾನಿ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಟಿ.ಕೃಷ್ಣಮೂರ್ತಿ, ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕ ಶ್ಯಾಮ್ಸುಂದರ್ ಕಾಂಬ್ಳೆ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್