
ವಿಜಯಪುರ, 05 ಜುಲೈ (ಹಿ.ಸ.)
ಆ್ಯಂಕರ್ : ಬಂಜಾರಾ ಸಮಾಜದ ಹಕ್ಕುಗಳು, ಸ್ವಾಭಿಮಾನ ಮತ್ತು ನ್ಯಾಯಯುತ ಬೇಡಿಕೆಗಳ ಕುರಿತು ರಾಜ್ಯಾದ್ಯಂತ ಜನಜಾಗೃತಿ ಮೂಡಿಸುವ ಉದ್ದೇಶದಿಂದ ವಿಜಯಪುರದಲ್ಲಿ ಆಯೋಜಿಸಲಾಗುತ್ತಿರುವ 'ದಿಕ್ಸೂಚಿ ಬಂಜಾರಾ–ಕರ್ನಾಟಕ' ಜನಜಾಗೃತಿ ಸಮಾವೇಶದ ಕುರಿತು ಪತ್ರಿಕಾಗೋಷ್ಠಿ ನಡೆಯಿತು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಹಾಗೂ ಆಯೋಜಕರು ಸಮಾವೇಶದ ಉದ್ದೇಶ, ಹೋರಾಟದ ಹಿನ್ನೆಲೆ ಮತ್ತು ಮುಂದಿನ ಕಾರ್ಯಕ್ರಮಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಪ್ರಭು ಚೌಹಾಣ್ ಹಾಗೂ
ಮಹೇಂದ್ರ ನಾಯಕ್, ಬಂಜಾರಾ ಸಮಾಜವು ಹಲವು ವರ್ಷಗಳಿಂದ ಶಿಕ್ಷಣ, ಉದ್ಯೋಗ, ಸಾಮಾಜಿಕ ನ್ಯಾಯ, ಮೂಲಭೂತ ಸೌಲಭ್ಯಗಳು ಹಾಗೂ ಸಂವಿಧಾನಬದ್ಧ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದು, ಈ ಹೋರಾಟವನ್ನು ಮತ್ತಷ್ಟು ಸಂಘಟಿತವಾಗಿ ಮುಂದುವರಿಸಲು ‘ದಿಕ್ಸೂಚಿ ಬಂಜಾರಾ–ಕರ್ನಾಟಕ’ ಸಮಾವೇಶ ಪ್ರಮುಖ ವೇದಿಕೆಯಾಗಲಿದೆ ಎಂದು ತಿಳಿಸಿದರು.
ಸಮಾಜದ ಯುವಜನರು, ಮಹಿಳೆಯರು ಹಾಗೂ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಸಮಾಜದ ಅಭಿವೃದ್ಧಿಗೆ ಸರ್ಕಾರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಬಂಜಾರಾ ಸಮುದಾಯದ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಮಾವೇಶವು ಸಮಾಜದ ಐಕ್ಯತೆ, ಸ್ವಾಭಿಮಾನ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಹೊಸ ದಿಕ್ಕು ತೋರಿಸುವ ಕಾರ್ಯಕ್ರಮವಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಲಾಯಿತು.
ಪತ್ರಿಕಾಗೋಷ್ಠಿಯಲ್ಲಿ ಸಮಾವೇಶದ ರೂಪುರೇಷೆಗಳು, ಉದ್ದೇಶಗಳು ಹಾಗೂ ಸಮಾಜದ ವಿವಿಧ ಸಮಸ್ಯೆಗಳ ಕುರಿತು ವಿವರವಾಗಿ ಚರ್ಚಿಸಿ, ಸಾರ್ವಜನಿಕರು ಹಾಗೂ ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande