ಕೆರೂರಿನಲ್ಲಿ ಸಾರ್ವಜನಿಕರ ಮೇಲೆ ದಾಳಿ ನಡೆಸಿದ್ದ ಮಂಗ ಸೆರೆ
ಬಾಗಲಕೋಟೆ, 05 ಜುಲೈ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಕಳೆದ ಶುಕ್ರವಾರ ಹಾಗೂ ಶನಿವಾರ ಸಾರ್ವಜನಿಕರ ಮೇಲೆ ಏಕಾಏಕಿ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದ ಮಂಗವನ್ನು ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಯಶಸ್ವಿ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ಕಳೆದ
ಮಂಕಿ


ಬಾಗಲಕೋಟೆ, 05 ಜುಲೈ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರ ಪಟ್ಟಣದಲ್ಲಿ ಕಳೆದ ಶುಕ್ರವಾರ ಹಾಗೂ ಶನಿವಾರ ಸಾರ್ವಜನಿಕರ ಮೇಲೆ ಏಕಾಏಕಿ ದಾಳಿ ನಡೆಸಿ ಆತಂಕ ಸೃಷ್ಟಿಸಿದ್ದ ಮಂಗವನ್ನು ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರ ಯಶಸ್ವಿ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ.

ಕಳೆದ ಎರಡು ದಿನಗಳಿಂದ ಮಂಗವು ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಸಂಚರಿಸುತ್ತಾ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದವರು, ಮನೆಗಳ ಮುಂದೆ ನಿಂತಿದ್ದವರು ಹಾಗೂ ವ್ಯಾಪಾರಸ್ಥರ ಮೇಲೆ ದಾಳಿ ನಡೆಸಿ ಹಲವರಿಗೆ ಗಾಯಗೊಳಿಸಿತ್ತು. ಮಂಗದ ದಾಳಿಯಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಮಕ್ಕಳು ಹಾಗೂ ವೃದ್ಧರು ಮನೆಯಿಂದ ಹೊರಬರಲು ಸಹ ಆತಂಕ ವ್ಯಕ್ತಪಡಿಸುತ್ತಿದ್ದರು.

ಸ್ಥಳೀಯರು ಹಲವು ಬಾರಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮಂಗದ ಚಲನವಲನವನ್ನು ಗಮನಿಸಿ ಕಾರ್ಯಾಚರಣೆ ಆರಂಭಿಸಿದರು. ಹಲವು ಗಂಟೆಗಳ ಕಾರ್ಯಾಚರಣೆಯ ಬಳಿಕ ಮಂಗವನ್ನು ಯಾವುದೇ ಅನಾಹುತ ಸಂಭವಿಸದಂತೆ ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಸಿಬ್ಬಂದಿ ಯಶಸ್ವಿಯಾದರು.

ಮಂಗ ಸೆರೆ ಹಿಡಿಯಲ್ಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಕಳೆದ ಎರಡು ದಿನಗಳಿಂದ ಭಯದ ವಾತಾವರಣದಲ್ಲಿ ಬದುಕುತ್ತಿದ್ದ ಜನರು ಅರಣ್ಯ ಇಲಾಖೆಯ ತ್ವರಿತ ಕಾರ್ಯಾಚರಣೆಯನ್ನು ಶ್ಲಾಘಿಸಿದರು.

ಅರಣ್ಯ ಇಲಾಖೆ ಅಧಿಕಾರಿಗಳು ಮಾತನಾಡಿ, ಸೆರೆ ಹಿಡಿಯಲಾದ ಮಂಗದ ಆರೋಗ್ಯ ತಪಾಸಣೆ ನಡೆಸಿ, ಅಗತ್ಯ ಕ್ರಮಗಳನ್ನು ಅನುಸರಿಸಿ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು. ಅಲ್ಲದೆ, ಕಾಡು ಪ್ರಾಣಿಗಳು ಜನವಸತಿ ಪ್ರದೇಶಕ್ಕೆ ಬಂದಲ್ಲಿ ಅವುಗಳನ್ನು ಕೆಣಕದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಕಾರ್ಯಾಚರಣೆಯಿಂದ ಕೆರೂರ ಪಟ್ಟಣದಲ್ಲಿ ಕಳೆದ ಎರಡು ದಿನಗಳಿಂದ ನಿರ್ಮಾಣವಾಗಿದ್ದ ಆತಂಕಕ್ಕೆ ತೆರೆ ಬಿದ್ದಿದ್ದು, ಸಾರ್ವಜನಿಕರು ನೆಮ್ಮದಿಯ ವಾತಾವರಣದಲ್ಲಿ ತಮ್ಮ ದೈನಂದಿನ ಚಟುವಟಿಕೆಗಳನ್ನು ಪುನರಾರಂಭಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande