
ಬಾಗಲಕೋಟೆ, 04 ಜುಲೈ (ಹಿ.ಸ.)
ಆ್ಯಂಕರ್ : ಕಳೆದ ಕೆಲವು ದಿನಗಳಿಂದ ಮಳೆಯ ಕೊರತೆಯಿಂದ ಕಂಗಾಲಾಗಿದ್ದ ಬಾಗಲಕೋಟೆ ಜಿಲ್ಲೆಯ ಮುಧೋಳ ಭಾಗದಲ್ಲಿ ಇಂದು ಬೆಳ್ಳಂಬೆಳಗ್ಗೆ ಮಳೆ ಚುರುಕುಗೊಂಡು ಸುರಿದ ಪರಿಣಾಮ ರೈತರಲ್ಲಿ ಹೊಸ ನಿರೀಕ್ಷೆ ಮೂಡಿದೆ.
ರಾತ್ರಿಯಿಂದಲೇ ಜಿಟಿಜಿಟಿಯಾಗಿ ಆರಂಭಗೊಂಡ ಮಳೆ, ಬೆಳಗ್ಗಿನ ವೇಳೆಗೆ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಂಡು ಕೆಲಕಾಲ ಜೋರಾಗಿ ಸುರಿಯಿತು.
ಬೆಳಗ್ಗೆಯಿಂದಲೇ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದ್ದು, ಇನ್ನಷ್ಟು ಮಳೆಯಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ತಂಪಾದ ಹವಾಮಾನದಿಂದ ಜನರು ನೆಮ್ಮದಿಯ ಅನುಭವ ಪಡೆದರೆ, ಕೃಷಿ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ.
ಮಳೆಯ ಕೊರತೆಯಿಂದ ಬಿತ್ತನೆ ಮಾಡಿದ ಬೆಳೆಗಳ ಬೆಳವಣಿಗೆ ಕುಂಠಿತವಾಗುವ ಆತಂಕದಲ್ಲಿದ್ದ ರೈತರು, ಈ ಮಳೆಯಿಂದ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿದ್ದ ಕೃಷಿಕರು ಇದೀಗ ಉತ್ತಮ ಮಳೆಯ ನಿರೀಕ್ಷೆಯಲ್ಲಿ ಇದ್ದಾರೆ. ಈ ಮಳೆ ಮುಂದುವರಿದರೆ ಜೋಳ, ಸಜ್ಜೆ, ತೊಗರಿ, ಹತ್ತಿ ಸೇರಿದಂತೆ ವಿವಿಧ ಬೆಳೆಗಳಿಗೆ ಜೀವದಾನವಾಗಲಿದೆ ಎಂದು ರೈತರು ಅಭಿಪ್ರಾಯಪಟ್ಟಿದ್ದಾರೆ.
ಮಳೆ ಸುರಿದ ಪರಿಣಾಮ ಪಟ್ಟಣದ ಕೆಲ ತಗ್ಗು ಪ್ರದೇಶಗಳಲ್ಲಿ ನೀರು ಹರಿದು, ರಸ್ತೆಗಳು ತೇವಗೊಂಡಿದ್ದವು. ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಿದರೆ, ಮಕ್ಕಳು ಹಾಗೂ ಯುವಕರು ಮಳೆಯ ಸೊಬಗನ್ನು ಸಂಭ್ರಮದಿಂದ ಆಸ್ವಾದಿಸಿದರು.
ಹವಾಮಾನ ಇಲಾಖೆ ಮುಂದಿನ ಕೆಲ ದಿನಗಳಲ್ಲಿಯೂ ಮಳೆಯ ಸಾಧ್ಯತೆ ಇರುವುದಾಗಿ ಸೂಚಿಸಿರುವ ಹಿನ್ನೆಲೆಯಲ್ಲಿ ರೈತರು ಉತ್ತಮ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಈ ಮಳೆ ಹೊಸ ಚೈತನ್ಯ ತುಂಬಿದ್ದು, ಮುಧೋಳ ಭಾಗದ ಜನರಲ್ಲಿ ಆಶಾವಾದದ ವಾತಾವರಣ ನಿರ್ಮಾಣವಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande