ಮಳೆ ಕೊರತೆ : ಪರಿಸ್ಥಿತಿ ನಿರ್ವಹಣೆಗೆ ಅಧಿಕಾರಿಗಳು ಸನ್ನದ್ಧರಾಗಿರಬೇಕು
ಕೊಪ್ಪಳ, 04 ಜುಲೈ (ಹಿ.ಸ.) ಆ್ಯಂಕರ್: ಮುಂಗಾರು ಋತುವಿನಲ್ಲಿ ಮಳೆಯ ಕೊರತೆಯ ಮುನ್ಸೂಚನೆ ಕಾಣುತ್ತಿದ್ದು, ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ಈಗಿನಿಂದಲೇ ಸಿದ್ಧರಾಗಬೇಕು. ಜನತೆಗೆ ಕುಡಿಯುವ ನೀರು ಒದಗಿಸಲು ಹಾಗೂ ಜನತೆಗೆ ಉದ್ಯೋಗ ಒದಗಿಸುವ ಕ್ರಿಯಾಯೋಜನೆಗಳನ್ನು ಸಿದ್ದಪಡಿಸಬೇಕು ಎಂದು ವೈದ್ಯಕ
ಮಳೆ ಕೊರತೆ : ಪರಿಸ್ಥಿತಿ ನಿರ್ವಹಣೆಗೆ ಅಧಿಕಾರಿಗಳು ಸನ್ನದ್ಧರಾಗಿರಬೇಕು


ಮಳೆ ಕೊರತೆ : ಪರಿಸ್ಥಿತಿ ನಿರ್ವಹಣೆಗೆ ಅಧಿಕಾರಿಗಳು ಸನ್ನದ್ಧರಾಗಿರಬೇಕು


ಮಳೆ ಕೊರತೆ : ಪರಿಸ್ಥಿತಿ ನಿರ್ವಹಣೆಗೆ ಅಧಿಕಾರಿಗಳು ಸನ್ನದ್ಧರಾಗಿರಬೇಕು


ಕೊಪ್ಪಳ, 04 ಜುಲೈ (ಹಿ.ಸ.)

ಆ್ಯಂಕರ್: ಮುಂಗಾರು ಋತುವಿನಲ್ಲಿ ಮಳೆಯ ಕೊರತೆಯ ಮುನ್ಸೂಚನೆ ಕಾಣುತ್ತಿದ್ದು, ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ಈಗಿನಿಂದಲೇ ಸಿದ್ಧರಾಗಬೇಕು. ಜನತೆಗೆ ಕುಡಿಯುವ ನೀರು ಒದಗಿಸಲು ಹಾಗೂ ಜನತೆಗೆ ಉದ್ಯೋಗ ಒದಗಿಸುವ ಕ್ರಿಯಾಯೋಜನೆಗಳನ್ನು ಸಿದ್ದಪಡಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವರು ಹಾಗೂ ಕೊಪ್ಪಳ ಜಿಲ್ಲೆಯ ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಆರ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕೊಪ್ಪಳ ಜಿಲ್ಲೆಯ ಪ್ರಕೃತಿ ವಿಕೋಪ ನಿರ್ವಹಣೆಯ ಮೇಲುಸ್ತುವಾರಿ ಸಚಿವರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆ ಕೊರತೆಯಿಂದ ಕೃಷಿ ಚಟುವಟಿಕೆ ಕಡಿಮೆಯಾದಲ್ಲಿ ಸರ್ಕಾರದಿಂದ ಮಾನವ ದಿನಗಳನ್ನು ಸೃಜಿಸುವುದು ಅನಿವಾರ್ಯವಾಗಲಿದೆ. ಆದ್ದರಿಂದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅಗತ್ಯವಿರುವ ಕಾಮಗಾರಿಗಳ ಬಗ್ಗೆ ವಿಬಿ ಜಿ ರಾಮ್ ಜಿ ಯೋಜನೆಯಡಿ ಮಾನವ ದಿನಗಳನ್ನು ಸೃಜಿಸಲು ಕ್ರಿಯಾ ಯೋಜನೆ ರೂಪಿಸಬೇಕು. ಜಾಬ್ ಕಾರ್ಡ್ ವಿತರಣೆಗೆ ಕ್ರಮ ವಹಿಸಬೇಕು. ಬೆಳೆ ವಿಮಾ ಯೋಜನೆಗೆ ಜಿಲ್ಲೆಯ ಎಲ್ಲ ಅರ್ಹ ರೈತರು ನೋಂದಣಿ ಮಾಡಿಕೊಳ್ಳುವಂತೆ ಕೃಷಿ ಇಲಾಖೆಯ ಅಧಿಕಾರಿಗಳು ಜಾಗೃತಿ ಮೂಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಂಗಾರು ಆರಂಭಗೊಂಡು ತಿಂಗಳುಗಳು ಕಳೆದರೂ ವಾಡಿಕೆಯಂತೆ ಮಳೆಯಾಗಿಲ್ಲ. ಇದರಿಂದ ರೈತರಿಗೆ ಬಿತ್ತನೆಗೆ ಅಡಚಣೆ ಉಂಟಾಗಿರುವುದು ಮಾತ್ರವಲ್ಲ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರದ ಅನುದಾನ ಬಳಸಿಕೊಂಡು ಅಗತ್ಯವಿರುವೆಡೆ ಆದ್ಯತೆ ಮೇರೆಗೆ ಕುಡಿಯುವ ನೀರು ಪೂರೈಕೆ ಮಾಡಿ, ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆ ಪಡೆಯುವುದು, ಟ್ಯಾಂಕರ್ಗಳ ಮೂಲಕ ನೀರು ಪೂರೈಸುವುದು ಅಥವಾ ಅನಿವಾರ್ಯ ಪರಿಸ್ಥಿತಿಗಳಲ್ಲಿ ಹೊಸ ಬೋರ್ವೆಲ್ ಕೊರೆಸುವುದು ಮುಂತಾದ ಪರಿಹಾರೋಪಾಯಗಳನ್ನು ಆದ್ಯತೆ ಮೇರೆಗೆ ನಿರ್ವಹಿಸಿ ಎಂದು ಅವರು ಹೇಳಿದರು.

ರೈತರ ಬೇಡಿಕೆಯನುಸಾರ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ಅಗತ್ಯ ದಾಸ್ತಾನು ಸಂಗ್ರಹಿಸಿ. ಹಾಗೆಯೇ ಖಾಸಗಿ ಮಾರಾಟ ಮಳಿಗೆಗಳಲ್ಲಿ ಬಿತ್ತನೆ ಬೀಜ ಅಥವಾ ರಸಗೊಬ್ಬರವನ್ನು ನಿಯಮಾನುಸಾರ ವಿತರಣೆ ಮಾಡಬೇಕು. ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಅಥವಾ ಕಳಪೆ ಗುಣಮಟ್ಟದ ಬೀಜಗಳು, ಕಲಬೆರಕೆ ಬೀಜ, ರಸಗೊಬ್ಬರ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಥವಾ ರಸಗೊಬ್ಬರ, ಬಿತ್ತನೆ ಬೀಜಗಳ ನಿಗದಿತ ದರ, ದಾಸ್ತಾನು ವಿವರಗಳನ್ನು ಮಳಿಗೆಗಳಲ್ಲಿ ಪ್ರದರ್ಶಿಸದೇ ಇದ್ದಲ್ಲಿ ಅಂತಹ ಮಳಿಗೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಕೃತಕ ಅಭಾವ ಸೃಷ್ಠಿಸಬಾರದು. ಈ ಬಗ್ಗೆ ಪರಿಶೀಲನೆಗಾಗಿ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಬೇಕು.

ದೇಶಾದ್ಯಂತ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಜುಲೈ 29 ರವರೆಗೆ ನಡೆಯಲಿದೆ. ಕೊಪ್ಪಳ ಜಿಲ್ಲೆಯಲ್ಲಿ ಸಹ ಈ ಕಾರ್ಯ ಅಚ್ಚುಕಟ್ಟಾಗಿ ನಡೆಯಬೇಕು. ಗಣತಿ ನಮೂನೆಗಳನ್ನು ಮತದಾರರಿಗೆ ಕೊಡುವ ಮತ್ತು ಅದನ್ನು ಮರಳಿ ಪಡೆಯುವ ಕಾರ್ಯವಾಗಬೇಕು. ಭರ್ತಿ ಮಾಡಿದ ಗಣತಿ ನಮೂನೆಯನ್ನು ಮತದಾರರು ಹಿಂದುರುಗಿಸದೇ ಇದ್ದಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ಅವರ ಹೆಸರು ಸೇರುವುದಿಲ್ಲ. ಮರಣ ಹೊಂದಿದ, ವಲಸೆ ಹೋದ ಮತದಾರರನ್ನು ಗುರುತಿಸಬೇಕು. ಭಾರತ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಪ್ರಕ್ರಿಯೆ ಪೂರ್ಣಗೊಳಿಸಿ. ಗ್ರಾಮ ಪಂಚಾಯತಿ ಹಾಗು ವಾರ್ಡ್ವಾರು ಸಹಾಯವಾಣಿ ಸ್ಥಾಪಿಸಿ, ಮತದಾರರ ಗೊಂದಲಗಳಿಗೆ, ದೂರುಗಳಿಗೆ ಸ್ಪಂದಿಸಿ ಎಂದು ಸಚಿವರು ಸೂಚಿಸಿದರು.

ಕರ್ನಾಟಕ ವಿಧಾನಸಭೆಯ ಪ್ರತಿ ಪಕ್ಷದ ಮುಖ್ಯ ಸಚೇತಕರು ಹಾಗೂ ಕುಷ್ಟಗಿ ಶಾಸಕರಾದ ದೊಡ್ಡನಗೌಡ ಹನುಮಗೌಡ ಪಾಟೀಲ ಅವರು ಮಾತನಾಡಿ, ಕುಷ್ಟಗಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಜೆಜೆಎಂ ಅಡಿ ಪೂರೈಕೆಯಾಗುವ ನೀರಿನಲ್ಲಿ ವ್ಯತ್ಯಯವಾಗುತ್ತಿದೆ. ಶಾಲಾ-ಕಾಲೇಜುಗಳ ಸಮಯಕ್ಕೆ ಅನುಕೂಲವಾಗುವಂತೆ ಬಸ್ಗಳನ್ನು ಒದಗಿಸಬೇಕು. ಬಸ್ಗಳ ಸಂಖ್ಯೆಯೂ ಕಡಿಮೆ ಇದ್ದು, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆ ಉಂಟಾಗಿದೆ. ಈ ಸಮಸ್ಯೆಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡು ಪರಿಹಾರ ಕಲ್ಪಿಸಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಯಲಬುರ್ಗಾ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಮಾತನಾಡಿ, ಯಲಬುರ್ಗಾ ಹಾಗೂ ಕುಕನೂರ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣುತ್ತಿದೆ. ಬಿತ್ತನೆ ಪ್ರಮಾಣ ಕಡಿಮೆ ಆಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ, ತೋಟಗಾರಿಕೆ ಹಾಗೂ ಕೃಷಿ ಜಂಟಿ ನಿರ್ದೇಶಕರು ಮತ್ತು ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಅವರನ್ನೊಳಗೊಂಡ ಅಧಿಕಾರಿಗಳ ತಂಡ ರಚನೆಯಾಗಬೇಕು. ಈ ತಂಡವು ಜಿಲ್ಲೆಯ ಎಲ್ಲಾ ತಾಲೂಕಿಗೆ ಸಂಚರಿಸಿ ಆಯಾ ಕಡೆಗಳಲ್ಲಿ ತಹಸೀಲ್ದಾರರು, ತಾಪಂ ಕಾರ್ಯನಿರ್ವಹಣಾಧಿಕಾರಿಗಳು, ಬಿಇಓ ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬಿತ್ತನೆ ಪ್ರಮಾಣ, ಕುಡಿವ ನೀರಿನ ಪರಿಸ್ಥಿತಿ ಸೇರಿದಂತೆ ಮಳೆ ಕೊರತೆಯ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಬೇಕು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ಮಾತನಾಡಿ, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸನ್ನಿವೇಶವನ್ನು ಎದುರಿಸಲು ಜಿಲ್ಲಾಡಳಿತ ಸಿದ್ದವಾಗಿದೆ. ಜೀವ ಹಾನಿ ಪ್ರಕರಣಗಳಿಗೆ ನಿಯಮಾನುಸಾರ ಪರಿಹಾರ ಒದಗಿಸಲಾಗಿದೆ. ರೈತ ಆತ್ಮಹತ್ಯೆ ಪ್ರಕರಣಗಳಿಗೆ ಪರಿಹಾರ ಒದಗಿಸಿದೆ. 39 ಪ್ರಾಣಿಗಳು ಮರಣ ಹೊಂದಿದ್ದು ಸೂಕ್ತ ಪರಿಹಾರ ವಿತರಣೆ ಮಾಡಲಾಗಿದೆ. ಮಳೆಯಿಂದ ಭಾಗಶಃ ಹಾನಿಯಾದ 44 ಮನೆಗಳಿಗೆ ಪರಿಹಾರ ಒದಗಿಸಿದೆ. ಕುಡಿಯುವ ನೀರು ಪೂರೈಕೆಗೆ ಅನುದಾನದ ಕೊರತೆ ಇಲ್ಲ ಎಂದು ಸಚಿವರಿಗೆ ಮಾಹಿತಿ ನೀಡಿದರು.

ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ ಕೃಷ್ಣಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.31 ರಷ್ಟು ಮಳೆಯ ಕೊರತೆಯಾಗಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಸಾಮಾನ್ಯ ಬಿತ್ತನೆ ಗುರಿ 3,49,892 ಹೆಕ್ಟೇರ್ ಆಗಿದ್ದು, ಇದುವರೆಗೂ 1,63,546 ಹೆಕ್ಟೆರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ಶೇ.47 ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.

ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಇದುವರೆಗೂ 3,203 ಅರ್ಜಿಗಳು ಸ್ವೀಕೃತಗೊಂಡಿದ್ದು, ರೈತರ ನೋಂದಣಿ ಕಾರ್ಯ ಪ್ರಗತಿಯಲ್ಲಿದೆ. ಯೂರಿಯಾ, ಡಿಎಪಿ, ಎಂಒಪಿ, ಕಾಂಪ್ಲೆಕ್ಸ್, ಎಸ್ಎಸ್ಪಿ ರಸಗೊಬ್ಬರಗಳ ಒಟ್ಟು ದಾಸ್ತಾನು 64,950 ಟನ್ಗಳಲ್ಲಿ 36,954 ಟನ್ ರಸಗೊಬ್ಬರ ಮಾರಾಟ ಮಾಡಲಾಗಿದ್ದು, ಜುಲೈ 2 ರಂತೆ 27,996 ಟನ್ ರಸಗೊಬ್ಬರ ಉಳಿಕೆ ದಾಸ್ತಾನು ಲಭ್ಯವಿದೆ ಎಂದು ವಿವರವಾದ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಕೃಷ್ಣಮೂರ್ತಿ ಟಿ., ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ, ಉಪವಿಭಾಗಾಧಿಕಾರಿ ಮಹಮ್ಮದ್ ಜೀಲಾನ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande