ಡಾಕ್ಟರೇಟ್ ಪಡೆದ ಗುರುಮಹಾಂತ ಶ್ರೀಗಳಿಗೆ ಮುಸ್ಲಿಂ ಮುಖಂಡರಿಂದ ಸನ್ಮಾನ
ಬಾಗಲಕೋಟೆ, 04 ಜುಲೈ (ಹಿ.ಸ.) ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಚಿತ್ತರಗಿ ಶ್ರೀವಿಜಯ ಮಹಾಂತೇಶ ಸಂಸ್ಥಾನಮಠದ ಪೀಠಾಧಿಪತಿ ಡಾ. ಗುರುಮಹಾಂತ ಶ್ರೀಗಳಿಗೆ ಇಳಕಲ್ಲ ನಗರದ ಮುಸ್ಲಿಂ ಮುಖಂಡರು ಹಾಗೂ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ವಿಶೇಷವಾಗಿ ಶ್ರೀಮಠಕ್
ಸನ್ಮಾನ


ಬಾಗಲಕೋಟೆ, 04 ಜುಲೈ (ಹಿ.ಸ.)

ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಚಿತ್ತರಗಿ ಶ್ರೀವಿಜಯ ಮಹಾಂತೇಶ ಸಂಸ್ಥಾನಮಠದ ಪೀಠಾಧಿಪತಿ ಡಾ. ಗುರುಮಹಾಂತ ಶ್ರೀಗಳಿಗೆ ಇಳಕಲ್ಲ ನಗರದ ಮುಸ್ಲಿಂ ಮುಖಂಡರು ಹಾಗೂ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು ವಿಶೇಷವಾಗಿ ಶ್ರೀಮಠಕ್ಕೆ ಕಾಲ್ನಡಿಗೆಯ ಮೂಲಕ ಆಗಮಿಸಿ ಸನ್ಮಾನಿಸಿ ಅಭಿನಂದಿಸಿದರು.

ಧರ್ಮ, ಜಾತಿ, ಮತಗಳ ಭೇದವನ್ನು ಮೀರಿ ಪರಸ್ಪರ ಸೌಹಾರ್ದತೆ ಮತ್ತು ಸಾಮಾಜಿಕ ಸಾಮರಸ್ಯದ ಸಂಕೇತವಾಗಿ ನಡೆದ ಈ ಕಾರ್ಯಕ್ರಮ ಗಮನ ಸೆಳೆಯಿತು. ಗೌರವ ಡಾಕ್ಟರೇಟ್ ಪಡೆದ ಹಿನ್ನೆಲೆಯಲ್ಲಿ ಡಾ. ಗುರುಮಹಾಂತ ಶ್ರೀಗಳ ಸಮಾಜಮುಖಿ ಸೇವೆ, ಶಿಕ್ಷಣ, ಧಾರ್ಮಿಕ ಹಾಗೂ ಮಾನವೀಯ ಕಾರ್ಯಗಳನ್ನು ಶ್ಲಾಘಿಸಿದ ಮುಸ್ಲಿಂ ಮುಖಂಡರು, ಶಾಲು ಹೊದಿಸಿ, ಹೂಮಾಲೆ ಅರ್ಪಿಸಿ, ಸನ್ಮಾನ ಪತ್ರ ನೀಡಿ ಗೌರವ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಸಮಾಜದ ಎಲ್ಲ ವರ್ಗಗಳನ್ನು ಒಗ್ಗೂಡಿಸುವಲ್ಲಿ ಡಾ. ಗುರುಮಹಾಂತ ಶ್ರೀಗಳ ಸೇವೆ ಮಾದರಿಯಾಗಿದ್ದು, ಅವರು ಪಡೆದಿರುವ ಗೌರವ ಡಾಕ್ಟರೇಟ್ ಇಡೀ ನಾಡಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಸನ್ಮಾನ ಸ್ವೀಕರಿಸಿದ ಡಾ. ಗುರುಮಹಾಂತ ಶ್ರೀಗಳು, ಸಮಾಜದಲ್ಲಿ ಸೌಹಾರ್ದತೆ, ಶಾಂತಿ ಹಾಗೂ ಸಹೋದರತ್ವದ ಸಂದೇಶವನ್ನು ಎಲ್ಲರೂ ಮುಂದುವರಿಸಿಕೊಂಡು ಹೋಗಬೇಕು. ಎಲ್ಲ ಧರ್ಮಗಳ ನಡುವೆ ಪ್ರೀತಿ, ವಿಶ್ವಾಸ ಮತ್ತು ಸಹಕಾರ ಹೆಚ್ಚಾದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಉಸ್ಮಾನಗಣಿ ಹುಮನಾಬಾದ್, ಸಯ್ಯದ್ ಬಾವುದ್ದೀನ್ ಖಾಜಿ, ಬಾಬುಸಾಬ್ ಶಿವನಗುತ್ತಿ, ಮುರ್ತುಜಾಸಾಬ್ ಕರಡಿ, ಮಹಮ್ಮದ್ ಯೂಸುಫ್ ಬಾಗವಾನ್, ಸದ್ದಾಂ ಮಕಾನದಾರ್ ಸೇರಿದಂತೆ ಅಂಜುಮನ್ ಸಂಸ್ಥೆಯ ಪದಾಧಿಕಾರಿಗಳು, ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.

ಧರ್ಮಗಳ ನಡುವೆ ಸೌಹಾರ್ದತೆ ಮತ್ತು ಪರಸ್ಪರ ಗೌರವಕ್ಕೆ ಈ ಸನ್ಮಾನ ಕಾರ್ಯಕ್ರಮ ಮತ್ತೊಂದು ಉತ್ತಮ ಉದಾಹರಣೆಯಾಗಿ ಮೂಡಿಬಂದಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande