ಆಲಮಟ್ಟಿ 524.256 ಟಿಎಂಸಿಗೆ ಎತ್ತರಿಸುವಂತೆ ಒತ್ತಾಯ: ಬೃಹತ್ ಹೋರಾಟ ತೀವ್ರ
ವಿಜಯಪುರ, 04 ಜುಲೈ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯವನ್ನು 524.256 ಟಿಎಂಸಿಗೆ ಹೆಚ್ಚಿಸುವಂತೆ ಒತ್ತಾಯಿಸಿ ಬೃಹತ್ ಮಟ್ಟದ ಜನಾಂದೋಲನ ನಡೆಯುತ್ತಿದೆ. ರೈತರು, ವಿವಿಧ ಕನ್ನಡಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಹಾಗ
ಪ್ರೊಟೆಸ್ಟ್


ವಿಜಯಪುರ, 04 ಜುಲೈ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನಲ್ಲಿ ಆಲಮಟ್ಟಿ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯವನ್ನು 524.256 ಟಿಎಂಸಿಗೆ ಹೆಚ್ಚಿಸುವಂತೆ ಒತ್ತಾಯಿಸಿ ಬೃಹತ್ ಮಟ್ಟದ ಜನಾಂದೋಲನ ನಡೆಯುತ್ತಿದೆ. ರೈತರು, ವಿವಿಧ ಕನ್ನಡಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಕೃಷ್ಣಾ ಕಣಿವೆಯ ಜನರು ಈ ಹೋರಾಟದಲ್ಲಿ ಭಾಗವಹಿಸಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದ್ದಾರೆ.

ಕೃಷ್ಣಾ ಕಣಿವೆ ಜಲ ಸಂರಕ್ಷಣಾ ಹೋರಾಟ ಸಮಿತಿಯ ಪ್ರಮುಖ ಅರವಿಂದ ಕುಲಕರ್ಣಿ ಮಾತನಾಡಿ, ಉತ್ತರ ಕರ್ನಾಟಕದ ರೈತರ ಬದುಕು ಮತ್ತು ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಆಲಮಟ್ಟಿ ಜಲಾಶಯದ ಎತ್ತರವನ್ನು 524.256 ಟಿಎಂಸಿಗೆ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಅವರು ಮಾತನಾಡುತ್ತಾ, ಕೃಷ್ಣಾ ನ್ಯಾಯಮಂಡಳಿ ನೀಡಿರುವ ಅವಕಾಶವನ್ನು ರಾಜ್ಯ ಸರ್ಕಾರ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಾದರೆ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ, ರಾಯಚೂರು ಸೇರಿದಂತೆ ಉತ್ತರ ಕರ್ನಾಟಕದ ಲಕ್ಷಾಂತರ ರೈತರಿಗೆ ನೀರಾವರಿ ಸೌಲಭ್ಯ ದೊರೆಯಲಿದೆ. ಕುಡಿಯುವ ನೀರಿನ ಸಮಸ್ಯೆಗೂ ಶಾಶ್ವತ ಪರಿಹಾರ ಸಿಗಲಿದ್ದು, ಕೃಷಿ ಉತ್ಪಾದನೆ ಹೆಚ್ಚಾಗಿ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ ಎಂದು ಹೇಳಿದರು.

ಹಲವಾರು ವರ್ಷಗಳಿಂದ ಈ ಭಾಗದ ಜನರು ತಮ್ಮ ಹಕ್ಕಿನ ನೀರಿಗಾಗಿ ಹೋರಾಟ ನಡೆಸುತ್ತಿದ್ದು, ಈಗಲೂ ಸರ್ಕಾರದಿಂದ ಸ್ಪಷ್ಟ ನಿರ್ಧಾರ ಹೊರಬರದಿರುವುದು ವಿಷಾದನೀಯ. ಈ ಬಾರಿ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಮೇಲೆ ಒತ್ತಡ ತರಲಾಗುವುದು ಎಂದು ಅರವಿಂದ ಕುಲಕರ್ಣಿ ಎಚ್ಚರಿಸಿದರು.

ಹೋರಾಟದಲ್ಲಿ ವಿವಿಧ ರೈತ ಸಂಘಟನೆಗಳ ಮುಖಂಡರು, ಸಾರ್ವಜನಿಕರು, ಮಹಿಳೆಯರು ಹಾಗೂ ಯುವಕರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಆಲಮಟ್ಟಿ ಯೋಜನೆಗೆ ಸಂಬಂಧಿಸಿದ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು.

ಹೋರಾಟಗಾರರು, ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ ಸಂಬಂಧ ಸರ್ಕಾರ ಕೂಡಲೇ ಅಗತ್ಯ ಆಡಳಿತಾತ್ಮಕ ಹಾಗೂ ತಾಂತ್ರಿಕ ಕ್ರಮಗಳನ್ನು ಕೈಗೊಂಡು, ಉತ್ತರ ಕರ್ನಾಟಕದ ರೈತರ ದಶಕಗಳ ಕನಸನ್ನು ನನಸಾಗಿಸಬೇಕು ಎಂದು ಒತ್ತಾಯಿಸಿದರು.

ಕೃಷ್ಣಾ ಕಣಿವೆ ಪ್ರದೇಶದ ಅಭಿವೃದ್ಧಿ, ನೀರಾವರಿ ವಿಸ್ತರಣೆ ಹಾಗೂ ರೈತರ ಹಿತಾಸಕ್ತಿಗಾಗಿ ಈ ಹೋರಾಟ ಮುಂದುವರಿಯಲಿದ್ದು, ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ರಾಜ್ಯವ್ಯಾಪಿ ಹೋರಾಟ ರೂಪಿಸಲಾಗುವುದು ಎಂದು ಹೋರಾಟ ಸಮಿತಿ ಎಚ್ಚರಿಕೆ ನೀಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande