
ಸಾಂಬಾ, ಜುಲೈ 25(ಹಿ.ಸ.):
ಆ್ಯಂಕರ್:
ಜಮ್ಮು-ಕಾಶ್ಮೀರದ ಸಾಂಬಾ ಮತ್ತು ಕಥುವಾ ಜಿಲ್ಲೆಗಳಲ್ಲಿನ ಅಂತರರಾಷ್ಟ್ರೀಯ ಗಡಿ ಸಮೀಪ ಅನುಮಾನಾಸ್ಪದ ಪಾಕಿಸ್ತಾನಿ ಡ್ರೋನ್‌ಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆ ಆರಂಭಿಸಿವೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಶುಕ್ರವಾರ ತಡರಾತ್ರಿ ಸಾಂಬಾ ಜಿಲ್ಲೆಯ ವಿಜಯಪುರ ಪ್ರದೇಶದ ಟಾರೋರ್ ಗ್ರಾಮದ ಮೇಲ್ಭಾಗದಲ್ಲಿ ಸೇನಾ ಸಿಬ್ಬಂದಿ ಅನುಮಾನಾಸ್ಪದ ಹಾರುವ ವಸ್ತುವೊಂದನ್ನು ಗಮನಿಸಿದ್ದು, ಅದು ಪಾಕಿಸ್ತಾನಿ ಡ್ರೋನ್ ಆಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ತಕ್ಷಣವೇ ಡ್ರೋನ್ ವಿರೋಧಿ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಬಳಿಕ ಡ್ರೋನ್ ಮತ್ತೆ ಪಾಕಿಸ್ತಾನದ ಕಡೆಗೆ ಹಿಂತಿರುಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ರೀತಿ, ಶುಕ್ರವಾರ ಸಂಜೆ ಕಥುವಾ ಜಿಲ್ಲೆಯ ಹೀರಾನಗರ ವಲಯದ ಚಕ್ ನಲುವಾ ಗ್ರಾಮದ ಮೇಲ್ಭಾಗದಲ್ಲಿಯೂ ಕೆಲಕಾಲ ಅನುಮಾನಾಸ್ಪದ ಡ್ರೋನ್ ಹಾರಾಟ ನಡೆಸಿರುವುದು ಕಂಡುಬಂದಿದೆ.
ಈ ಎರಡೂ ಪ್ರದೇಶಗಳಲ್ಲಿ ಡ್ರೋನ್ ಯಾವುದೇ ವಸ್ತು ಅಥವಾ ಸ್ಫೋಟಕಗಳನ್ನು ಬಿಸಾಡಿದೆಯೇ ಎಂಬುದನ್ನು ಪತ್ತೆಹಚ್ಚಲು ಭದ್ರತಾ ಪಡೆಗಳು ವ್ಯಾಪಕ ಶೋಧ ಕಾರ್ಯಾಚರಣೆ ನಡೆಸುತ್ತಿವೆ.
ಗಡಿಭಾಗದಲ್ಲಿ ಇಂತಹ ಡ್ರೋನ್ ಚಟುವಟಿಕೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ ನಿಗಾವನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.