ಕಾರ್ಗಿಲ್ ವಿಜಯ ದಿವಸ್: ರಾಷ್ಟ್ರಪತಿ,ಪ್ರಧಾನಿ ಸೇರಿ ಗಣ್ಯರಿಂದ ವೀರ ಯೋಧರಿಗೆ ಶ್ರದ್ಧಾಂಜಲಿ
ನವದೆಹಲಿ, ಜುಲೈ 26(ಹಿ.ಸ.): ಆ್ಯಂಕರ್:ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ರಾಷ್ಟ್ರವು ಇಂದು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರಿಗೆ ಕೃತಜ್ಞತೆಯಿಂದ ನಮನ ಸಲ್ಲಿಸಿತು. ಈ ವರ್ಷದ ಮುಖ್ಯ ಕಾರ್ಯಕ್ರಮವನ್ನು ನವದೆಹಲಿಯ ಬದಲು ಲಡಾಖ್‌ನ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಆಯೋಜಿಸಲಾಗ
द्रास में स्थित कारगिल युद्ध स्मारक। फोटो - इंटरनेट मीडिया


ನವದೆಹಲಿ, ಜುಲೈ 26(ಹಿ.ಸ.):

ಆ್ಯಂಕರ್:ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ರಾಷ್ಟ್ರವು ಇಂದು ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರಿಗೆ ಕೃತಜ್ಞತೆಯಿಂದ ನಮನ ಸಲ್ಲಿಸಿತು. ಈ ವರ್ಷದ ಮುಖ್ಯ ಕಾರ್ಯಕ್ರಮವನ್ನು ನವದೆಹಲಿಯ ಬದಲು ಲಡಾಖ್‌ನ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಆಯೋಜಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕಾರ್ಯಕ್ರಮದ ಪೂರ್ವಸಂಧ್ಯೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದ್ರಾಸ್‌ಗೆ ಭೇಟಿ ನೀಡಿ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಪುಷ್ಪನಮನ ಸಲ್ಲಿಸಿದರು.

ರಾಷ್ಟ್ರಪತಿ ದ್ರೌಪದಿ ಮುರ್ಮು ತಮ್ಮ ಸಂದೇಶದಲ್ಲಿ, “ಮಾತೃಭೂಮಿಯ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ವೀರ ಯೋಧರಿಗೆ ವಿನಮ್ರ ನಮನಗಳು. ಅವರ ಅಪ್ರತಿಮ ಪರಾಕ್ರಮ, ಅಚಲ ಸಂಕಲ್ಪ ಮತ್ತು ದೇಶಭಕ್ತಿ ಭಾರತೀಯ ಸೇನೆಯ ಹೆಮ್ಮೆಯ ಪರಂಪರೆಯ ಸಂಕೇತವಾಗಿದೆ. ಅವರ ಶೌರ್ಯಗಾಥೆ ಮುಂದಿನ ಪೀಳಿಗೆಗೂ ರಾಷ್ಟ್ರಸೇವೆ ಮತ್ತು ಕರ್ತವ್ಯನಿಷ್ಠೆಗೆ ಸ್ಫೂರ್ತಿಯಾಗಲಿದೆ” ಎಂದು ತಿಳಿಸಿದ್ದಾರೆ.

ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, “ಕಾರ್ಗಿಲ್ ಯುದ್ಧದಲ್ಲಿ ಅಸಾಧಾರಣ ಧೈರ್ಯ, ಅಚಲ ಸಂಕಲ್ಪ ಹಾಗೂ ಪರಮ ತ್ಯಾಗದ ಮೂಲಕ ಭಾರತದ ಐತಿಹಾಸಿಕ ವಿಜಯಕ್ಕೆ ಕಾರಣರಾದ ಸೈನಿಕರಿಗೆ ದೇಶ ಗೌರವ ನಮನ ಸಲ್ಲಿಸುತ್ತದೆ. ಈ ವಿಜಯವು ಭಾರತದ ಸೇನಾ ಸಾಮರ್ಥ್ಯ, ರಾಷ್ಟ್ರೀಯ ಏಕತೆ ಮತ್ತು ದೇಶರಕ್ಷಣೆಯ ದೃಢ ಸಂಕಲ್ಪದ ಪ್ರತೀಕವಾಗಿದೆ” ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, “ಕಾರ್ಗಿಲ್ ವಿಜಯ ದಿವಸದಂದು ದೇಶದ ಭದ್ರತೆಗಾಗಿ ಅಸಾಧಾರಣ ಧೈರ್ಯ ಮತ್ತು ಸಮರ್ಪಣೆಯಿಂದ ಸೇವೆ ಸಲ್ಲಿಸಿದ ವೀರ ಯೋಧರಿಗೆ ಇಡೀ ರಾಷ್ಟ್ರ ಕೃತಜ್ಞತೆ ಸಲ್ಲಿಸುತ್ತದೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿಯೂ ಅವರ ಶೌರ್ಯ ಮತ್ತು ದೇಶಭಕ್ತಿ ಸದಾ ರಾಷ್ಟ್ರದ ಹೆಮ್ಮೆಯಾಗಿ ಉಳಿಯಲಿದೆ” ಎಂದು ಹೇಳಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, “ಕಾರ್ಗಿಲ್ ವಿಜಯ ದಿವಸ್ ಭಾರತೀಯ ಸೇನೆಯ ಅಜೇಯ ಶೌರ್ಯ ಮತ್ತು ಅದ್ಭುತ ಪರಾಕ್ರಮದ ಸಂಕೇತವಾಗಿದೆ. 1999ರಲ್ಲಿ ಹಿಮಾಲಯದ ದುರ್ಗಮ ಹಿಮಾಚ್ಛಾದಿತ ಶಿಖರಗಳಲ್ಲಿ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ‘ಆಪರೇಷನ್ ವಿಜಯ್’ ಮೂಲಕ ಶತ್ರುವನ್ನು ಸೋಲಿಸಿ ದೇಶದ ಅಖಂಡತೆಯನ್ನು ಕಾಪಾಡಿದ ಎಲ್ಲ ವೀರ ಯೋಧರಿಗೆ ಶಿರಸಾ ನಮನ” ಎಂದು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, “ಆಪರೇಷನ್ ವಿಜಯ್ ವೇಳೆ ಮಾತೃಭೂಮಿಯ ಗೌರವ ಮತ್ತು ಸಾರ್ವಭೌಮತೆಯನ್ನು ಕಾಪಾಡಲು ಪರಮ ತ್ಯಾಗ ಮಾಡಿದ ಎಲ್ಲ ಶಹೀದರಿಗೆ ನಮನಗಳು. ಅವರ ಅಸಾಧಾರಣ ಸಾಹಸ ಮತ್ತು ದೇಶಭಕ್ತಿ ಮುಂದಿನ ಪೀಳಿಗೆಗೂ ಸ್ಫೂರ್ತಿಯಾಗಲಿದೆ. ಶಹೀದರ ಕುಟುಂಬಗಳ ತ್ಯಾಗವೂ ರಾಷ್ಟ್ರದ ಶಾಶ್ವತ ಹೆಮ್ಮೆಯಾಗಿದೆ” ಎಂದು ಹೇಳಿದ್ದಾರೆ.

1999ರ ಮೇ ತಿಂಗಳಲ್ಲಿ ಆರಂಭವಾದ ಕಾರ್ಗಿಲ್ ಯುದ್ಧ ಸುಮಾರು 60 ದಿನಗಳ ಕಾಲ ನಡೆಯಿತು. ಪಾಕಿಸ್ತಾನದ ಒಳನುಸುಳುವಿಕೆ ಪತ್ತೆಯಾದ ಬಳಿಕ ಭಾರತೀಯ ಭೂಸೇನೆ ‘ಆಪರೇಷನ್ ವಿಜಯ್’ ಮತ್ತು ಭಾರತೀಯ ವಾಯುಪಡೆ ‘ಆಪರೇಷನ್ ಸಫೇದ್ ಸಾಗರ್’ ಕಾರ್ಯಾಚರಣೆಗಳನ್ನು ಆರಂಭಿಸಿತು. ತೀವ್ರ ಚಳಿ, ದುರ್ಗಮ ಪರ್ವತ ಪ್ರದೇಶ ಮತ್ತು ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿಯೂ ಭಾರತೀಯ ಯೋಧರು ಟೊಲೊಲಿಂಗ್, ಟೈಗರ್ ಹಿಲ್ ಹಾಗೂ ಪಾಯಿಂಟ್–4875 ಸೇರಿದಂತೆ ಪ್ರಮುಖ ಶಿಖರಗಳನ್ನು ಮರಳಿ ವಶಪಡಿಸಿಕೊಂಡರು.

1999ರ ಜುಲೈ 26ರಂದು ಭಾರತೀಯ ಸೇನೆ ಎಲ್ಲ ಕಳೆದುಕೊಂಡ ಕಾವಲುಚೌಕಿಗಳನ್ನು ಪುನಃ ವಶಪಡಿಸಿಕೊಂಡು ಐತಿಹಾಸಿಕ ವಿಜಯ ಸಾಧಿಸಿತು. ಇದೇ ವಿಜಯದ ಸ್ಮರಣಾರ್ಥ ಪ್ರತಿವರ್ಷ ಜುಲೈ 26ರಂದು ದೇಶಾದ್ಯಂತ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande