ಕಾರ್ಗಿಲ್ ವಿಜಯ ದಿವಸ್: ವೀರ ಯೋಧರಿಗೆ ರಾಷ್ಟ್ರದ ನಮನ
ನವದೆಹಲಿ, ಜುಲೈ 26(ಹಿ.ಸ.): ಆ್ಯಂಕರ್: 1999ರ ಕಾರ್ಗಿಲ್ ಯುದ್ಧದಲ್ಲಿ ದೇಶದ ಸಾರ್ವಭೌಮತೆ ಮತ್ತು ಭೂಪ್ರದೇಶವನ್ನು ಕಾಪಾಡಲು ಪ್ರಾಣಾರ್ಪಣೆ ಮಾಡಿದ ಭಾರತೀಯ ಸಶಸ್ತ್ರ ಪಡೆಗಳ ವೀರ ಯೋಧರಿಗೆ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ದೇಶ ಇಂದು ಕೃತಜ್ಞತೆಯಿಂದ ನಮನ ಸಲ್ಲಿಸಿದೆ. ಈ ವರ್ಷದ ಮುಖ್ಯ ಕಾರ್ಯಕ್ರಮವನ್
केंद्रीय गृह एवं सहकारितामंत्री अमित शाह की एक्स हैंडल पर साझा पोस्ट।


ನವದೆಹಲಿ, ಜುಲೈ 26(ಹಿ.ಸ.):

ಆ್ಯಂಕರ್:

1999ರ ಕಾರ್ಗಿಲ್ ಯುದ್ಧದಲ್ಲಿ ದೇಶದ ಸಾರ್ವಭೌಮತೆ ಮತ್ತು ಭೂಪ್ರದೇಶವನ್ನು ಕಾಪಾಡಲು ಪ್ರಾಣಾರ್ಪಣೆ ಮಾಡಿದ ಭಾರತೀಯ ಸಶಸ್ತ್ರ ಪಡೆಗಳ ವೀರ ಯೋಧರಿಗೆ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ದೇಶ ಇಂದು ಕೃತಜ್ಞತೆಯಿಂದ ನಮನ ಸಲ್ಲಿಸಿದೆ. ಈ ವರ್ಷದ ಮುಖ್ಯ ಕಾರ್ಯಕ್ರಮವನ್ನು ನವದೆಹಲಿಯ ಬದಲು ಲಡಾಖ್‌ನ ದ್ರಾಸ್‌ನಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದ ಪೂರ್ವದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ದ್ರಾಸ್‌ಗೆ ಭೇಟಿ ನೀಡಿ ಯುದ್ಧ ಸ್ಮಾರಕದಲ್ಲಿ ಪುಷ್ಪನಮನ ಸಲ್ಲಿಸಿದರು. ಇಂದು ಬೆಳಗ್ಗೆ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಮತ್ತು ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ತಮ್ಮ ಸಂದೇಶದಲ್ಲಿ, ಕಾರ್ಗಿಲ್ ಯುದ್ಧದಲ್ಲಿ ಅಪ್ರತಿಮ ಶೌರ್ಯ, ಅಚಲ ಸಂಕಲ್ಪ ಮತ್ತು ಪರಮ ತ್ಯಾಗದ ಮೂಲಕ ಭಾರತದ ಐತಿಹಾಸಿಕ ವಿಜಯಕ್ಕೆ ಕಾರಣರಾದ ಸೈನಿಕರಿಗೆ ದೇಶ ಕೃತಜ್ಞವಾಗಿದೆ ಎಂದು ತಿಳಿಸಿದ್ದಾರೆ. ಈ ವಿಜಯವು ಭಾರತದ ಸೇನಾ ಸಾಮರ್ಥ್ಯ, ರಾಷ್ಟ್ರೀಯ ಏಕತೆ ಮತ್ತು ತಾಯ್ನಾಡಿನ ಪ್ರತಿಯೊಂದು ಅಂಗುಲ ಭೂಮಿಯನ್ನು ರಕ್ಷಿಸುವ ದೃಢಸಂಕಲ್ಪದ ಪ್ರತೀಕವಾಗಿದೆ ಎಂದಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾರ್ಗಿಲ್ ವಿಜಯ ದಿವಸ್ ಭಾರತೀಯ ಸೇನೆಯ ಅಜೇಯ ಶೌರ್ಯ ಮತ್ತು ಪರಾಕ್ರಮದ ಸಂಕೇತವಾಗಿದೆ ಎಂದು ಹೇಳಿದ್ದಾರೆ. 1999ರಲ್ಲಿ ಹಿಮಾಲಯದ ದುರ್ಗಮ ಹಿಮಾಚ್ಛಾದಿತ ಶಿಖರಗಳಲ್ಲಿ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಭಾರತೀಯ ಯೋಧರು ‘ಆಪರೇಷನ್ ವಿಜಯ್’ ಮೂಲಕ ಶತ್ರುವನ್ನು ಸೋಲಿಸಿ ದೇಶದ ಅಖಂಡತೆಯನ್ನು ಕಾಪಾಡಿದರು ಎಂದು ಸ್ಮರಿಸಿದ್ದಾರೆ.

ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ‘ಆಪರೇಷನ್ ವಿಜಯ್’ ವೇಳೆ ಮಾತೃಭೂಮಿಯ ಗೌರವ ಮತ್ತು ಸಾರ್ವಭೌಮತೆಯನ್ನು ರಕ್ಷಿಸಲು ಪರಮ ತ್ಯಾಗ ಮಾಡಿದ ಎಲ್ಲ ವೀರ ಯೋಧರಿಗೆ ನಮನ ಸಲ್ಲಿಸಿದ್ದಾರೆ. ಅವರ ಅಸಾಧಾರಣ ಧೈರ್ಯ ಮುಂದಿನ ಪೀಳಿಗೆಗಳಿಗೆ ಸದಾ ಸ್ಫೂರ್ತಿಯಾಗಲಿದೆ ಎಂದು ಹೇಳಿದ್ದಾರೆ.

1999ರ ಮೇ ತಿಂಗಳಲ್ಲಿ ಆರಂಭವಾದ ಕಾರ್ಗಿಲ್ ಯುದ್ಧವು ಸುಮಾರು 60 ದಿನಗಳ ಕಾಲ ನಡೆಯಿತು. ಪಾಕಿಸ್ತಾನದ ಒಳನುಸುಳುವಿಕೆ ಪತ್ತೆಯಾದ ಬಳಿಕ ಭಾರತೀಯ ಭೂಸೇನೆ ‘ಆಪರೇಷನ್ ವಿಜಯ್’ ಮತ್ತು ವಾಯುಪಡೆ ‘ಆಪರೇಷನ್ ಸಫೇದ್ ಸಾಗರ್’ ಕಾರ್ಯಾಚರಣೆಗಳನ್ನು ಆರಂಭಿಸಿತು. ತೀವ್ರ ಚಳಿ, ದುರ್ಗಮ ಪರ್ವತ ಪ್ರದೇಶ ಮತ್ತು ಶೂನ್ಯಕ್ಕಿಂತ ಕಡಿಮೆ ತಾಪಮಾನದಲ್ಲಿಯೂ ಭಾರತೀಯ ಯೋಧರು ಟೊಲೊಲಿಂಗ್, ಟೈಗರ್ ಹಿಲ್ ಮತ್ತು ಪಾಯಿಂಟ್ 4875 ಸೇರಿದಂತೆ ಪ್ರಮುಖ ಶಿಖರಗಳನ್ನು ಮರಳಿ ವಶಪಡಿಸಿಕೊಂಡರು.

1999ರ ಜುಲೈ 26ರಂದು ಭಾರತ ತನ್ನ ಎಲ್ಲ ಕಳೆದುಕೊಂಡ ಗಡಿಯ ಕಾವಲುಚೌಕಿಗಳನ್ನು ಪುನಃ ವಶಪಡಿಸಿಕೊಂಡು ಐತಿಹಾಸಿಕ ವಿಜಯ ಸಾಧಿಸಿತು. ಇದೇ ವಿಜಯದ ಸ್ಮರಣಾರ್ಥ ಪ್ರತಿವರ್ಷ ಜುಲೈ 26ರಂದು ದೇಶಾದ್ಯಂತ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಗುತ್ತದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande