

ಶಿಮ್ಲಾ, ಜುಲೈ 24(ಹಿ.ಸ.):
ಆ್ಯಂಕರ್:ಹಿಮಾಚಲ ಪ್ರದೇಶದ ಲಾಹೌಲ್-ಸ್ಪಿತಿ ಜಿಲ್ಲೆಯ ಉದಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಸಂಭವಿಸಿದ ಭೀಕರ ರಸ್ತೆ ದುರಂತದಲ್ಲಿ 13 ಮಂದಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಕಢೂನಾಲಾ-ರಾಹೌಲಿ ಪ್ರದೇಶದ ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ನಿರ್ಮಿಸಿರುವ ಮುಖ್ಯ ರಸ್ತೆಯಲ್ಲಿ ಸಾಗುತ್ತಿದ್ದ ಟಾಟಾ ಸುಮೋ ವಾಹನದ ಮೇಲೆ ಬೆಟ್ಟದಿಂದ ಏಕಾಏಕಿ ಬೃಹತ್ ಬಂಡೆ ಉರುಳಿ ಬಿದ್ದ ಪರಿಣಾಮ ಈ ದುರಂತ ಸಂಭವಿಸಿದೆ. ಅಪಘಾತದ ವೇಳೆ ವಾಹನದಲ್ಲಿ ಚಾಲಕ ಸೇರಿ 15 ಮಂದಿ ಪ್ರಯಾಣಿಸುತ್ತಿದ್ದರು. ಬಂಡೆ ವಾಹನದ ಮೇಲೆ ಬಿದ್ದ ರಭಸಕ್ಕೆ ಅದು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಹೆಚ್ಚಿನ ಪ್ರಯಾಣಿಕರು ಮೃತಪಟ್ಟಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು, ಜಿಲ್ಲಾಡಳಿತ ಹಾಗೂ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಗೊಂಡಿದ್ದ ಇಬ್ಬರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಲಾಹೌಲ್-ಸ್ಪಿತಿ ಜಿಲ್ಲಾಧಿಕಾರಿ ಕಿರಣ್ ಭಡಾನಾ ಮಾಹಿತಿ ನೀಡಿ, ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ತಿಳಿಸಿದ್ದಾರೆ. ಅಪಘಾತವು ಚಂಬಾ ಜಿಲ್ಲೆಯ ಪಾಂಗಿ ಮತ್ತು ಲಾಹೌಲ್-ಸ್ಪಿತಿ ಜಿಲ್ಲೆಯ ಗಡಿ ಭಾಗದಲ್ಲಿ ಸಂಭವಿಸಿದ್ದು, ಮೃತರೆಲ್ಲರೂ ಚಂಬಾ ಜಿಲ್ಲೆಯ ಪಾಂಗಿ ಪ್ರದೇಶದ ನಿವಾಸಿಗಳಾಗಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಮೃತರ ಗುರುತು ಪತ್ತೆ ಕಾರ್ಯ ಮುಂದುವರಿದಿದ್ದು, ಗುರುತು ದೃಢಪಟ್ಟ ಬಳಿಕ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಟಿಂಡಿ ಪೊಲೀಸ್ ಠಾಣೆ ಹಾಗೂ ಉದಯಪುರ ಪೊಲೀಸರು ಸ್ಥಳದಲ್ಲಿದ್ದು ಅಗತ್ಯ ಕ್ರಮ ಕೈಗೊಂಡಿದ್ದಾರೆ.
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಭೂಕುಸಿತ ಹಾಗೂ ಬಂಡೆಗಳು ಉರುಳುವ ಘಟನೆಗಳು ಹೆಚ್ಚಾಗಿವೆ. ಹೀಗಾಗಿ ದುರ್ಬಲ ಗುಡ್ಡಗಾಡು ಪ್ರದೇಶಗಳಲ್ಲಿ ಸಂಚರಿಸುವಾಗ ಸಾರ್ವಜನಿಕರು ವಿಶೇಷ ಎಚ್ಚರಿಕೆ ವಹಿಸುವಂತೆ ಆಡಳಿತ ಮನವಿ ಮಾಡಿದೆ. ಪ್ರಯಾಣಕ್ಕೂ ಮುನ್ನ ರಸ್ತೆ ಮತ್ತು ಹವಾಮಾನ ಪರಿಸ್ಥಿತಿಯ ಮಾಹಿತಿ ಪಡೆದುಕೊಳ್ಳುವಂತೆ ಸಲಹೆ ನೀಡಲಾಗಿದೆ.
ಜೂನ್ 30ರಿಂದ ಹಿಮಾಚಲ ಪ್ರದೇಶದಲ್ಲಿ ಮುಂಗಾರು ಆರಂಭವಾಗಿದ್ದು, ಈ ದುರಂತಕ್ಕೂ ಮುನ್ನ ಮಳೆ ಸಂಬಂಧಿತ ವಿವಿಧ ಅವಘಡಗಳಲ್ಲಿ 75 ಮಂದಿ ಮೃತಪಟ್ಟಿದ್ದರು. ಲಾಹೌಲ್-ಸ್ಪಿತಿ ದುರಂತ ಸೇರಿ ಮಳೆ ಅವಘಡಗಳಲ್ಲಿ ಮೃತಪಟ್ಟವರ ಸಂಖ್ಯೆ 88ಕ್ಕೆ ಏರಿಕೆಯಾಗಿದೆ.
ಇದೇ ವೇಳೆ, ಜುಲೈ 27ರಿಂದ 29ರವರೆಗೆ ಹಿಮಾಚಲ ಪ್ರದೇಶದ ಹಲವು ಜಿಲ್ಲೆಗಳಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಕಿತ್ತಳೆ (ಆರೆಂಜ್) ಅಲರ್ಟ್ ಘೋಷಿಸಿದೆ. ಅನಗತ್ಯ ಪ್ರಯಾಣವನ್ನು ತಪ್ಪಿಸಿ, ಭೂಕುಸಿತ ಸಂಭವಿಸಬಹುದಾದ ಪ್ರದೇಶಗಳಿಂದ ದೂರವಿರಲು ಜಿಲ್ಲಾಡಳಿತ ಸಾರ್ವಜನಿಕರಿಗೆ ಮತ್ತೊಮ್ಮೆ ಸೂಚನೆ ನೀಡಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.