
ನವದೆಹಲಿ, 23 ಜುಲೈ (ಹಿ.ಸ.):
ಆ್ಯಂಕರ್:
ದೇಶದ ಪ್ರತಿ ವಿದ್ಯಾರ್ಥಿಯ ಭದ್ರ ಭವಿಷ್ಯಕ್ಕೆ ಮೋದಿ ಸರ್ಕಾರ ಬದ್ಧವಾಗಿದೆ. ಆದರೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ರಾಜಕೀಯ ಕಾರಣಕ್ಕಾಗಿ ವಿದ್ಯಾರ್ಥಿ ಸಮೂಹದಲ್ಲಿ ತಪ್ಪು ಮಾಹಿತಿ ಹರಡುತ್ತಿದ್ದಾರೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು,'ಮೋದಿ ಸರ್ಕಾರದಲ್ಲಿ 152 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ' ಎಂದೆಲ್ಲಾ ತಪ್ಪು ಮಾಹಿತಿಯನ್ನು ಯುವ ಸಮೂಹಕ್ಕೆ ಹರಡುತ್ತಿದ್ದಾರೆ. ಜವಾಬ್ದಾರಿಯುತ ಲೋಕಸಭೆ ವಿಪಕ್ಷ ನಾಯಕರಿಂದ ಕೇಂದ್ರ ಇದನ್ನು ನಿರೀಕ್ಷಿಸುವುದಿಲ್ಲ ಎಂದು ಜೋಶಿ ಆಕ್ಷೇಪಿಸಿದ್ದಾರೆ.
ರಾಹುಲ್ ಗಾಂಧಿ ವಿದ್ಯಾರ್ಥಿ-ಯುವ ಸಮುದಾಯದಲ್ಲಿ ಇಂಥ ತಪ್ಪು ಮಾಹಿತಿ ಹರಡುತ್ತಿರುವುದು ದುರದೃಷ್ಟಕರ ಮತ್ತು ತಾವು ರಾಜಕೀಯವಾಗಿ ಪ್ರಚಲಿತದಲ್ಲಿರಲು ವಿದ್ಯಾರ್ಥಿಗಳ ವಿಷಯವನ್ನು ರಾಜಕೀಕರಣಗೊಳಿಸುವುದು ತೀವ್ರ ಬೇಸರದ ಸಂಗತಿ ಎಂದು ಸಚಿವ ಪ್ರಲ್ಹಾದ ಜೋಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇಂದ್ರದಿಂದ ತ್ವರಿತ ಕ್ರಮ:
ದೇಶದ ಪ್ರತಿಯೊಬ್ಬ ವಿದ್ಯಾರ್ಥಿ ಭವಿಷ್ಯವನ್ನು ರಕ್ಷಿಸಲು ಪ್ರಧಾನಿ ಮೋದಿ ಸರ್ಕಾರ ಬೇಷರತ್ತಾಗಿ ಬದ್ಧವಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ತಿಳಿದ ಕೆಲವೇ ದಿನಗಳಲ್ಲಿ ನಿರ್ಣಾಯಕ ಕ್ರಮ ಕೈಗೊಂಡಿದೆ ಮತ್ತು ಎಲ್ಲಾ ಆರೋಪಿಗಳನ್ನು ಜೈಲಿಗೆ ಹಾಕಲಾಯಿತು ಎಂದು ಜೋಶಿ ಸ್ಪಷ್ಟಪಡಿಸಿದ್ದಾರೆ.
ಅಲ್ಲದೆ, ಕೇಂದ್ರ ಸರ್ಕಾರ ಮರು-ನೀಟ್ ಯನ್ನು ಯಶಸ್ವಿಯಾಗಿ ನಡೆಸಿತು. ಲಕ್ಷಾಂತರ ಶ್ರಮಶೀಲ ಆಕಾಂಕ್ಷಿಗಳು ಅರ್ಹತೆ ಆಧಾರದ ಮೇಲೆ ಸ್ಪರ್ಧಿಸಲು ನ್ಯಾಯಯುತ, ಪಾರದರ್ಶಕವಾಗಿ ಅವಕಾಶ ಪಡೆದರು ಎಂದು ಹೇಳಿದ್ದಾರೆ.
ಸಂಸತ್ತಿನೊಳಗೆ ಈ ವಿಷಯದ ಬಗ್ಗೆ ರಚನಾತ್ಮಕ, ವಾಸ್ತವಿಕ ಚರ್ಚೆಗೆ ಸರ್ಕಾರ ಸಂಪೂರ್ಣ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹಾಗಿದ್ದರೂ ಸದನದ ಹೊರಗೆ ಕಾಂಗ್ರೆಸ್ ಹೈ ಡ್ರಾಮಾ ಮಾಡುತ್ತಿದೆ ಎಂದು ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.