
ನವದೆಹಲಿ, ಜುಲೈ 23(ಹಿ.ಸ.):
ಆ್ಯಂಕರ್:
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಭಾಗಿಯಾಗಿರುವವರಿಗೆ ಕಠಿಣ ಶಿಕ್ಷೆ ವಿಧಿಸಲು ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಗೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ರಾಜೀನಾಮೆ ನೀಡುವವರೆಗೆ ನೀಟ್ ವಿಚಾರದಲ್ಲಿ ಸಂಸತ್ತಿನಲ್ಲಿ ಚರ್ಚೆ ನಡೆಸುವುದಿಲ್ಲ ಎಂದು ಪ್ರತಿಪಕ್ಷಗಳು ಸ್ಪಷ್ಟಪಡಿಸಿವೆ.
ತೃಣಮೂಲ ಕಾಂಗ್ರೆಸ್ ಸಂಸದೆ ಸಾಗರಿಕಾ ಘೋಷ್ ಮಾತನಾಡಿ, ಮೊದಲು ರಾಜೀನಾಮೆ, ನಂತರ ಚರ್ಚೆ ಎಂಬುದು ನಮ್ಮ ನಿಲುವು. ನೀಟ್ ವಿಷಯದ ಕುರಿತು ಚರ್ಚೆ ನಡೆಸಲು ನಾವು ಸಿದ್ಧರಿದ್ದರೂ, ಅದಕ್ಕೂ ಮೊದಲು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ರಾಜೀನಾಮೆ ನೀಡಬೇಕು. ಅವರು ಏಕೆ ರಾಜೀನಾಮೆ ನೀಡುತ್ತಿಲ್ಲ ಎಂಬುದು ಪ್ರಮುಖ ಪ್ರಶ್ನೆಯಾಗಿದೆ ಎಂದು ಹೇಳಿದರು.
ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಮಾತನಾಡಿ, ಪ್ರತಿಭಟನೆ ಸಂಸತ್ತಿಗೆ ಮಾತ್ರ ಸೀಮಿತವಾಗುವುದಿಲ್ಲ. ಅಗತ್ಯವಿದ್ದರೆ ಬೀದಿಗಿಳಿದು ಹೋರಾಟ ಮುಂದುವರಿಸುತ್ತೇವೆ. ಧರ್ಮೇಂದ್ರ ಪ್ರಧಾನ ಅವರ ರಾಜೀನಾಮೆ ಬೇಡಿಕೆಯಿಂದ ಒಂದು ಹೆಜ್ಜೆಯೂ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದರು.
ಸಮಾಜವಾದಿ ಪಕ್ಷದ ಸಂಸದ ರಾಮಗೋಪಾಲ್ ಯಾದವ್, ಧರ್ಮೇಂದ್ರ ಪ್ರಧಾನ ಅವರ ಅವಧಿಯಲ್ಲಿ ಎಷ್ಟು ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ ಎಂಬುದರ ಕುರಿತು ಶ್ವೇತಪತ್ರ ಪ್ರಕಟಿಸಬೇಕು ಎಂದು ಆಗ್ರಹಿಸಿದರು. ಎಷ್ಟು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ, ಎಷ್ಟು ಮಂದಿಗೆ ಶಿಕ್ಷೆಯಾಗಿದೆ, ಎಷ್ಟು ಮಂದಿ ಜೈಲು ಸೇರಿದ್ದಾರೆ ಎಂಬ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದರು.
ಇನ್ನೊಂದೆಡೆ, ಶಿಕ್ಷಣ ಸಚಿವರ ರಾಜೀನಾಮೆಗಾಗಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದರೆ, ಅದಕ್ಕೆ ಪ್ರತಿಯಾಗಿ ಭಾರತೀಯ ಜನತಾ ಪಕ್ಷದ ಸಂಸದರೂ ಪ್ರತಿಭಟನೆ ನಡೆಸಿದರು. ಈ ವೇಳೆ ಬಿಜೆಪಿ ಸಂಸದ ಅರುಣ್ ಸಿಂಗ್ ಅವರು ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಅವರ ಕೈಯಲ್ಲಿದ್ದ ಶಿಕ್ಷಣ ಸಚಿವರ ರಾಜೀನಾಮೆ ಬೇಡಿಕೆಯ ಫಲಕವನ್ನು ಕಸಿದುಕೊಂಡ ಘಟನೆ ಗಮನ ಸೆಳೆಯಿತು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.