ಆಸಿಯಾನ್ ಪ್ರಾದೇಶಿಕ ವೇದಿಕೆಯಲ್ಲಿ ಭಾರತದ ನಿಲುವು ಮಂಡಿಸಿದ ಜೈಶಂಕರ್
ಆಸಿಯಾನ್ ಪ್ರಾದೇಶಿಕ ವೇದಿಕೆಯಲ್ಲಿ ಭಾರತದ ನಿಲುವು ಮಂಡಿಸಿದ ಜೈಶಂಕರ್; ಭಯೋತ್ಪಾದನೆ, ಸಮುದ್ರ ಭದ್ರತೆ, ಕೃತಕ ಬುದ್ಧಿಮತ್ತೆ ಕುರಿತು ಒತ್ತು
ಆಸಿಯಾನ್ ಪ್ರಾದೇಶಿಕ ವೇದಿಕೆ ಸಚಿವರ ಸಭೆಯಲ್ಲಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್


ಮನಿಲಾ, 23 ಜುಲೈ (ಹಿ.ಸ.):

ಆ್ಯಂಕರ್:ಫಿಲಿಪ್ಪೀನ್ಸ್‌ನ ಮನಿಲಾದಲ್ಲಿ ನಡೆದ 33ನೇ ಆಸಿಯಾನ್ ಪ್ರಾದೇಶಿಕ ವೇದಿಕೆ ಸಚಿವರ ಸಭೆಯಲ್ಲಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಭಾಗವಹಿಸಿ, ಇಂಡೋ-ಪೆಸಿಫಿಕ್ ಪ್ರದೇಶದ ಭದ್ರತೆ, ಭಯೋತ್ಪಾದನೆ, ಸಮುದ್ರ ಸುರಕ್ಷತೆ, ವಿಪತ್ತು ನಿರ್ವಹಣೆ, ಕೃತಕ ಬುದ್ಧಿಮತ್ತೆ ಹಾಗೂ ಸೈಬರ್ ಅಪರಾಧ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಭಾರತದ ನಿಲುವನ್ನು ಮಂಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಪ್ರಸ್ತುತದ ಸಂಕೀರ್ಣ ಜಾಗತಿಕ ಪರಿಸ್ಥಿತಿಯಲ್ಲಿ ಇಂಡೋ-ಪೆಸಿಫಿಕ್ ಪ್ರದೇಶದ ರಾಜಕೀಯ ಹಾಗೂ ಭದ್ರತಾ ವಿಷಯಗಳ ಕುರಿತು ಚರ್ಚಿಸಲು ಆಸಿಯಾನ್ ಪ್ರಾದೇಶಿಕ ವೇದಿಕೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದ್ದಾರೆ.

ಸಭೆಯಲ್ಲಿ ಅಂಗೀಕರಿಸಲಾದ ಮನಿಲಾ ಕಾರ್ಯಯೋಜನೆಯನ್ನು ಭಾರತ ಸ್ವಾಗತಿಸಿದ್ದು, ಅದರ ಐದು ಪ್ರಮುಖ ಸ್ತಂಭಗಳು ಇಂಡೋ-ಪೆಸಿಫಿಕ್ ಕುರಿತು ಭಾರತದ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತವೆ ಎಂದು ತಿಳಿಸಿದ್ದಾರೆ.

ವಿಪತ್ತು ನಿರ್ವಹಣೆಯಲ್ಲಿ ಭಾರತ ಸಹಕಾರದ ಧೋರಣೆಯನ್ನು ಅನುಸರಿಸುತ್ತಿದ್ದು, ಉತ್ತಮ ಕಾರ್ಯಪದ್ಧತಿಗಳ ಹಂಚಿಕೆ, ಸಾಮಾನ್ಯ ಕಾರ್ಯಾಚರಣೆ ವಿಧಾನಗಳ ರೂಪಣೆ ಹಾಗೂ ನೈಜ ಮತ್ತು ಮಾದರಿ ಅಭ್ಯಾಸಗಳನ್ನು ಕೈಗೊಳ್ಳುತ್ತಿದೆ ಎಂದು ವಿವರಿಸಿದ್ದಾರೆ. ವಿಪತ್ತು ನಿರೋಧಕ ಮೂಲಸೌಕರ್ಯಗಳ ಒಕ್ಕೂಟಕ್ಕೆ ಭಾರತ ಬೆಂಬಲ ನೀಡುತ್ತಿದ್ದು, ಅಗತ್ಯವಿದ್ದಾಗ ಕ್ಷೇತ್ರ ಆಸ್ಪತ್ರೆಗಳ ನಿಯೋಜನೆ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ, ಪರಿಹಾರ ಸಾಮಗ್ರಿ ಹಾಗೂ ವೈದ್ಯಕೀಯ ನೆರವು ಒದಗಿಸುತ್ತಿದೆ ಎಂದು ಹೇಳಿದ್ದಾರೆ.

ಇತ್ತೀಚಿನ ಅವಧಿಯಲ್ಲಿ ಶ್ರೀಲಂಕಾ, ಫಿಲಿಪ್ಪೀನ್ಸ್ ಹಾಗೂ ಜಮೈಕಾದಲ್ಲಿ ಚಂಡಮಾರುತದ ನಂತರದ ಪುನಶ್ಚೇತನ ಕಾರ್ಯಗಳು, ಮ್ಯಾನ್ಮಾರ್, ವೆನೆಜುವೆಲಾ ಮತ್ತು ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪಗಳ ಬಳಿಕ ಭಾರತ ಮಾನವೀಯ ನೆರವು ನೀಡಿರುವುದನ್ನು ಅವರು ಉಲ್ಲೇಖಿಸಿದ್ದಾರೆ.

ಭಯೋತ್ಪಾದನೆ ಕುರಿತು ಮಾತನಾಡಿದ ಜೈಶಂಕರ್, ಭಯೋತ್ಪಾದನೆಗೆ ಯಾವುದೇ ರೀತಿಯ ಸಹಿಷ್ಣುತೆ ಇರಬಾರದು ಮತ್ತು ಭಯೋತ್ಪಾದಕ ಕೃತ್ಯಗಳಿಗೆ ಪರಿಣಾಮಗಳು ಅನಿವಾರ್ಯ ಎಂಬ ಸ್ಪಷ್ಟ ಸಂದೇಶವನ್ನು ನೀಡಿದರು. ಭಯೋತ್ಪಾದನೆಗೆ ಹಣಕಾಸು ಒದಗಿಸುವ ಮೂಲಗಳನ್ನು ಸಂಪೂರ್ಣವಾಗಿ ತಡೆಯುವುದಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು. ಎಡಿಎಂಎಂ+ ವ್ಯವಸ್ಥೆಯ ತಜ್ಞರ ಕಾರ್ಯಪಡೆಯ ಸಹಾಧ್ಯಕ್ಷ ರಾಷ್ಟ್ರವಾಗಿ ಮಲೇಷ್ಯಾ ಜೊತೆ ಭಾರತ ಕಾರ್ಯನಿರ್ವಹಿಸುತ್ತಿದ್ದು, ಉತ್ತಮ ಕಾರ್ಯಪದ್ಧತಿಗಳ ಸಂಕಲನ ಸಿದ್ಧಪಡಿಸುವಲ್ಲಿ ಮುನ್ನಡೆ ವಹಿಸಿದೆ ಎಂದು ತಿಳಿಸಿದ್ದಾರೆ.

ಸಮುದ್ರ ಭದ್ರತೆ ವಿಷಯದಲ್ಲಿ, ಭಾರತದಲ್ಲಿರುವ ಮಾಹಿತಿ ಸಂಯೋಜನಾ ಕೇಂದ್ರ, ಇಂಡೋ-ಪೆಸಿಫಿಕ್ ಮೆರಿಟೈಮ್ ಡೊಮೇನ್ ಅವೇರ್‌ನೆಸ್ ಉಪಕ್ರಮ ಹಾಗೂ ಉತ್ತರ ಅರಬ್ಬೀ ಸಮುದ್ರದಿಂದ ಪಶ್ಚಿಮ ಪೆಸಿಫಿಕ್ ವರೆಗೆ ಭಾರತೀಯ ಪಡೆಗಳ ನಿಯೋಜನೆ ಕಡಲ್ಗಳ್ಳತನ, ಮಾನವ ಕಳ್ಳಸಾಗಣೆ, ಮಾದಕ ವಸ್ತುಗಳ ಸಾಗಣೆ ತಡೆ ಹಾಗೂ ಸುರಕ್ಷಿತ ಸಮುದ್ರ ವಾಣಿಜ್ಯಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದ್ದಾರೆ.

ಅಣ್ವಸ್ತ್ರ ಪ್ರಸರಣ ತಡೆ ಮತ್ತು ನಿಶಸ್ತ್ರೀಕರಣ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಎಚ್ಚರಿಕೆಯಿಂದ ಇರಬೇಕೆಂದು ಅವರು ಒತ್ತಿ ಹೇಳಿದ್ದಾರೆ.

ಕೃತಕ ಬುದ್ಧಿಮತ್ತೆಯ ಬಳಕೆಯಲ್ಲಿ ಜವಾಬ್ದಾರಿಯುತ ಮತ್ತು ಮಾನವ ಕೇಂದ್ರಿತ ದೃಷ್ಟಿಕೋನ ಅಗತ್ಯವಿದ್ದು, ಸೈಬರ್ ಅಪರಾಧಗಳು ಸೇರಿದಂತೆ ಹೊಸ ಸವಾಲುಗಳನ್ನು ಎದುರಿಸಲು ರಾಷ್ಟ್ರಗಳ ನಡುವಿನ ಸಹಕಾರ ಮತ್ತಷ್ಟು ಬಲವಾಗಬೇಕು ಎಂದು ಅಭಿಪ್ರಾಯಪಟ್ಟರು.

ಸಮುದ್ರ ಮಾರ್ಗದ ಹಡಗುಗಳ ಮೇಲಿನ ದಾಳಿಗಳು ಹಾಗೂ ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿಗಳು ಸಂಪೂರ್ಣವಾಗಿ ಅಸ್ವೀಕಾರಾರ್ಹವಾಗಿದ್ದು, ಅಂತಾರಾಷ್ಟ್ರೀಯ ಜಲಮಾರ್ಗಗಳ ಮೂಲಕದ ವ್ಯಾಪಾರ ಸುರಕ್ಷಿತ ಹಾಗೂ ಅಡೆತಡೆಯಿಲ್ಲದೆ ಸಾಗಬೇಕು ಎಂದು ಅವರು ಹೇಳಿದರು.

ದಕ್ಷಿಣ ಚೀನಾ ಸಮುದ್ರದ ಕುರಿತು ಮಾತನಾಡಿದ ಜೈಶಂಕರ್, ವಿಶ್ವಸಂಸ್ಥೆಯ ಸಮುದ್ರ ಕಾನೂನು ಒಪ್ಪಂದಕ್ಕೆ ಸಂಪೂರ್ಣ ಅನುಗುಣವಾಗಿರುವ, ಕಾನೂನುಬದ್ಧ, ಪರಿಣಾಮಕಾರಿ ಹಾಗೂ ಎಲ್ಲರ ಹಕ್ಕುಗಳಿಗೆ ಧಕ್ಕೆ ಉಂಟುಮಾಡದ ನಡವಳಿಕೆ ಸಂಹಿತೆ ಜಾರಿಗೆ ಬರಬೇಕೆಂಬ ಭಾರತದ ನಿಲುವನ್ನು ಪುನರುಚ್ಚರಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande