
ಅಹಲ್ಯನಗರ, ಜುಲೈ 23(ಹಿ.ಸ.):
ಆ್ಯಂಕರ್:
ದೆಹಲಿಯಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಬಲಪ್ರಯೋಗ ಅಥವಾ ದಮನದ ಬದಲು ಸಂವಾದದ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಹಾರಾಷ್ಟ್ರದ ಅಹಿಲ್ಯಾನಗರದಲ್ಲಿ ಗುರುವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ ವಿದ್ಯಾರ್ಥಿಗಳ ಬೇಡಿಕೆಗಳಿಗೆ ಬೆಂಬಲ ಸೂಚಿಸಿ ಅಣ್ಣಾ ಹಜಾರೆ ಎರಡು ಗಂಟೆಗಳ ಮೌನ ಪ್ರತಿಭಟನೆ ನಡೆಸಿದರು. ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ಪರೀಕ್ಷೆಗಳ ವಿಳಂಬ ಹಾಗೂ ಹೆಚ್ಚುತ್ತಿರುವ ನಿರುದ್ಯೋಗದಿಂದ ದೇಶದ ಲಕ್ಷಾಂತರ ಯುವಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಗಳನ್ನು ಕಾನೂನು-ಸುವ್ಯವಸ್ಥೆಯ ದೃಷ್ಟಿಯಿಂದ ಮಾತ್ರವಲ್ಲ, ಜನರ ನೈಜ ಕಳವಳವೆಂದು ಪರಿಗಣಿಸಬೇಕು ಎಂದು ಅವರು ಹೇಳಿದರು.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅಣ್ಣಾ ಹಜಾರೆ, ದೆಹಲಿಯ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ನಡೆದ ಹಿಂಸಾಚಾರ ಮತ್ತು ಪೊಲೀಸ್ ಕ್ರಮ ಬೇಸರ ತಂದಿದೆ ಎಂದು ತಿಳಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಜನರ ಧ್ವನಿಯನ್ನು ಹತ್ತಿಕ್ಕುವ ಬದಲು ಅವರೊಂದಿಗೆ ಸಂವಾದ ನಡೆಸುವುದು ಉತ್ತಮ ಮಾರ್ಗ ಎಂದಿದ್ದಾರೆ.
ಯಾವುದೇ ಸಚಿವರ ಹೊಣೆಗಾರಿಕೆ ನಿಗದಿಪಡಿಸಿ ರಾಜೀನಾಮೆ ಪಡೆಯುವುದರಿಂದ ಸರ್ಕಾರ ದುರ್ಬಲವಾಗುವುದಿಲ್ಲ. ಬದಲಾಗಿ ಇಡೀ ಸಚಿವ ಸಂಪುಟಕ್ಕೆ ಉತ್ತರದಾಯಿತ್ವದ ಸ್ಪಷ್ಟ ಸಂದೇಶ ನೀಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೆ, ಯಾವುದೇ ಹಗರಣ ಅಥವಾ ಲೋಪ ಸಂಭವಿಸಿದಾಗ ಕೆಳಮಟ್ಟದ ಅಧಿಕಾರಿಗಳ ಮೇಲೆ ಮಾತ್ರ ಹೊಣೆ ಹೊರಿಸುವ ಬದಲು, ಉನ್ನತ ಹುದ್ದೆಯಲ್ಲಿರುವವರ ಹೊಣೆಗಾರಿಕೆಯನ್ನೂ ನಿಗದಿಪಡಿಸಬೇಕು ಎಂದು ಅಣ್ಣಾ ಹಜಾರೆ ಒತ್ತಾಯಿಸಿದ್ದಾರೆ
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.