
ನವದೆಹಲಿ, ಜುಲೈ 22(ಹಿ.ಸ.)
ಆ್ಯಂಕರ್:
ಸಂಸತ್ತಿನಲ್ಲಿ ನಡೆಯುತ್ತಿರುವ ಸ್ಥಗಿತದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಚರ್ಚೆ ನಡೆಯುವ ವೇಳೆ ಪ್ರತಿಯೊಬ್ಬ ಸದಸ್ಯರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ. ಆದರೆ ಚರ್ಚೆಯನ್ನೇ ತಡೆಯಲು ಷರತ್ತುಗಳನ್ನು ವಿಧಿಸುವುದು ಪ್ರಜಾಪ್ರಭುತ್ವದ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಸಂಸತ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಆಗಲಿ ಅಥವಾ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆಗಲಿ, ಎಲ್ಲ ಸಂಸದರೂ ಸದನದಲ್ಲಿ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಮಂಡಿಸಬಹುದು. ಚರ್ಚೆಯಿಂದ ದೂರ ಉಳಿಯಲು ನೆಪಗಳನ್ನು ಹುಡುಕುವುದು ಸೂಕ್ತವಲ್ಲ ಎಂದು ತಿಳಿಸಿದರು.
ಸರ್ಕಾರ ಯಾವುದೇ ವಿಷಯದಿಂದ ಹಿಂದೆ ಸರಿಯುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಜವಾಬ್ದಾರಿ ಜನತೆಗೆ ತನ್ನ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡುವುದು ಹಾಗೂ ಸದನದಲ್ಲಿ ಪ್ರತಿಯೊಂದು ವಿಷಯದ ಮೇಲೂ ಚರ್ಚೆಗೆ ಸಿದ್ಧರಾಗಿರುವುದಾಗಿದೆ ಎಂದು ರಿಜಿಜು ಹೇಳಿದರು.
ವಿರೋಧ ಪಕ್ಷಗಳು ಚರ್ಚೆಗೆ ಅಡ್ಡಿಯಾಗುವಂತಹ ನಿಲುವುಗಳನ್ನು ಕೈಬಿಡಬೇಕು ಎಂದು ಮನವಿ ಮಾಡಿದ ಅವರು, ಸಂಸತ್ತಿನ ಕಲಾಪ ನಿಗದಿತ ನಿಯಮಗಳ ಪ್ರಕಾರ ನಡೆಯುತ್ತದೆ. ಮೊದಲು ಚರ್ಚೆ ನಡೆಯದಂತೆ ತಡೆಯುವುದು, ನಂತರ ಮಾತನಾಡಲು ಅವಕಾಶ ಸಿಗಲಿಲ್ಲ ಎಂದು ಆರೋಪಿಸುವುದು ಸರಿಯಾದ ಕ್ರಮವಲ್ಲ ಎಂದು ಹೇಳಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.