
ಜಮ್ಮು, ಜುಲೈ 22(ಹಿ.ಸ):
ಆ್ಯಂಕರ್:-ಕಾಶ್ಮೀರದಲ್ಲಿ ಮುಂದುವರಿದಿರುವ ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ಶ್ರೀ ಅಮರನಾಥ ಯಾತ್ರೆ, ಮಾತಾ ವೈಷ್ಣೋದೇವಿ ಯಾತ್ರೆ, ಶಿವ ಖೋರಿ ಹಾಗೂ ಮಚೈಲ್ ಮಾತಾ ಯಾತ್ರೆಗಳು ಸತತ ನಾಲ್ಕನೇ ದಿನವೂ ಸ್ಥಗಿತಗೊಂಡಿವೆ.
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಳೆ ಮುಂದುವರಿಯುವ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಆಡಳಿತವು ಜುಲೈ 18ರಿಂದಲೇ ಯಾತ್ರೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.
ಅಧಿಕಾರಿಗಳ ಮಾಹಿತಿ ಪ್ರಕಾರ, ಅನಂತನಾಗ ಜಿಲ್ಲೆಯ ನಂದಿವಾನ್–ಪಹಲ್ಗಾಮ್ ಮಾರ್ಗದಲ್ಲಿ ಸುಮಾರು 2,800 ಯಾತ್ರಿಕರು ಸಿಲುಕಿಕೊಂಡಿದ್ದು, ಜಮ್ಮುವಿನ ಭಗವತಿ ನಗರ ಯಾತ್ರಿ ನಿವಾಸ ಹಾಗೂ ಆಶ್ರಮಗಳಲ್ಲಿ 6,000ಕ್ಕೂ ಹೆಚ್ಚು ಭಕ್ತರು ತಂಗಿದ್ದಾರೆ. ಶ್ರೀನಗರ, ಬಾಲ್ಟಾಲ್ ಹಾಗೂ ಚಂದರ್‌ಕೋಟ್‌ನ ಯಾತ್ರಿ ನಿವಾಸಗಳಲ್ಲಿಯೂ ನೂರಾರು ಯಾತ್ರಿಕರು ಉಳಿದುಕೊಂಡಿದ್ದಾರೆ.
ಜಮ್ಮುವಿನಲ್ಲಿ ಸಿಲುಕಿದ್ದ 2,000ಕ್ಕೂ ಹೆಚ್ಚು ಅಮರನಾಥ ಯಾತ್ರಿಕರು ತಮ್ಮ ಸ್ವರಾಜ್ಯಗಳಿಗೆ ಮರಳಿದ್ದಾರೆ. ಇದೇ ವೇಳೆ ಯಾತ್ರಿಕರ ಅನುಕೂಲಕ್ಕಾಗಿ ವಿವಿಧ ಸಮಾಜಸೇವಾ ಸಂಸ್ಥೆಗಳು ಉಚಿತ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಿವೆ.
ಜುಲೈ 24ರವರೆಗೆ ಜಮ್ಮು-ಕಾಶ್ಮೀರದಲ್ಲಿ ಮಳೆ ಹಾಗೂ ಪ್ರತಿಕೂಲ ಹವಾಮಾನ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.