
ಬೆಂಗಳೂರು, 22 ಜುಲೈ (ಹಿ.ಸ.):
ಆ್ಯಂಕರ್:
ರಾಜ್ಯದ ಕಾವೇರಿ ಹಿತರಕ್ಷಣೆ ಮತ್ತು ಬೆಂಗಳೂರು ಸೇರಿದಂತೆ ಮಂಡ್ಯ ಮೈಸೂರು ಭಾಗದ ಜನರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ಪ್ರಸ್ತುತ ಸನ್ನಿವೇಶದಲ್ಲಿ ತಮಿಳುನಾಡಿಗೆ ಯಾವುದೇ ಹೆಚ್ಚಿನ ನೀರನ್ನು ಹರಿಸುವ ಅಗತ್ಯವಿಲ್ಲ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶ ಹೊರಡಿಸಿದೆ. ನವದೆಹಲಿಯಲ್ಲಿ ನಡೆದ ಪ್ರಾಧಿಕಾರದ ಉನ್ನತ ಮಟ್ಟದ ಜಂಟಿ ಸಭೆಯಲ್ಲಿ ಈ ನಿರ್ಣಾಯಕ ತೀರ್ಮಾನ ಕೈಗೊಳ್ಳಲಾಗಿದ್ದು, ಪ್ರಸಕ್ತ ವರ್ಷದ ಭೀಕರ ಸಂಕಷ್ಟದ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳಿಗೆ ಕಾವೇರಿ ಮಂಡಳಿ ಕಠಿಣ ಎಚ್ಚರಿಕೆ ನೀಡಿದೆ.
ಸಭೆಯಲ್ಲಿ ಬಹಿರಂಗವಾದ ನೀರಿನ ವಾಸ್ತವ ಅಂಕಿ-ಅಂಶಗಳು:
ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ಪ್ರಸ್ತುತ ಸ್ಥಿತಿಗತಿಯನ್ನು ಕೂಲಂಕಷವಾಗಿ ಪರಿಶೀಲಿಸಲಾಯಿತು. ಪ್ರಸಕ್ತ ಜೂನ್ ತಿಂಗಳಲ್ಲಿ ಒಟ್ಟು 2.5 ಟಿಎಂಸಿ ಕಾವೇರಿ ನೀರು ಬಿಡುಗಡೆಯಾಗಿದೆ ಹಾಗೂ ಜುಲೈ ತಿಂಗಳಲ್ಲಿ ಇದುವರೆಗೆ 0.54 ಟಿಎಂಸಿ ನೀರು ತಮಿಳುನಾಡು ತಲುಪಿದೆ ಎಂಬ ಅಂಶವನ್ನು ಸಭೆಯಲ್ಲಿ ಅಧಿಕೃತವಾಗಿ ವ್ಯಕ್ತಪಡಿಸಲಾಯಿತು. ಕೆಆರ್ಎಸ್, ಕಬಿನಿ ಹಾಗೂ ಹೇಮಾವತಿ ಜಲಾಶಯಗಳಲ್ಲಿ ನೀರಿನ ಸಂಗ್ರಹದ ತೀವ್ರ ಕೊರತೆಯಿದ್ದು, ಕುಡಿಯುವ ನೀರಿಗೂ ತತ್ವಾರ ಎದುರಾಗಲಿದೆ ಎಂಬ ಕರ್ನಾಟಕದ ನ್ಯಾಯಸಮ್ಮತ ವಾದವನ್ನು ಪ್ರಾಧಿಕಾರ ಪರಿಗಣಿಸಿದೆ. ತಮಗೆ ನಿಗದಿತ ಕೋಟಾದಂತೆ ಕೂಡಲೇ ಹೆಚ್ಚಿನ ನೀರು ಹರಿಸಲು ಪಟ್ಟುಹಿಡಿದಿದ್ದ ತಮಿಳುನಾಡಿಗೆ ಈ ತೀರ್ಪಿನಿಂದ ಹಿನ್ನಡೆಯಾಗಿದೆ.
ಕೃಷಿಗೆ ನೀರು ಬಳಕೆ ಮಾಡಬೇಡಿ - ಕಾವೇರಿ ಮಂಡಳಿ ಎಚ್ಚರಿಕೆ:
ಇದು ಅತ್ಯಂತ ಸಂಕಷ್ಟದ ವರ್ಷವಾಗಿರುವುದರಿಂದ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ಬಳಕೆಗೆ ಮಾತ್ರ ಮೀಸಲಿಡಬೇಕು. ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗಳಿಗೆ ನೀರನ್ನು ಬಳಕೆ ಮಾಡಬಾರದು ಎಂದು ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳಿಗೂ ಕಾವೇರಿ ನೀರು ನಿರ್ವಹಣಾ ಮಂಡಳಿ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ. ಮಳೆಯಾಗುವ ಪ್ರಮಾಣವನ್ನು ಆಧರಿಸಿ ಮುಂದಿನ ಸಭೆಯಲ್ಲಿ ಮರುಪರಿಶೀಲನೆ ನಡೆಸುವುದಾಗಿ ಪ್ರಾಧಿಕಾರ ತಿಳಿಸಿದ್ದು, ಈ ಆದೇಶದಿಂದ ಮಂಡ್ಯ, ಮೈಸೂರು ಹಾಗೂ ಬೆಂಗಳೂರು ಭಾಗದ ಜನತೆ ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ.
ಹಿಂದೂಸ್ತಾನ್ ಸಮಾಚಾರ್ / NAVEEN PARADESHII