
ನವದೆಹಲಿ, ಜುಲೈ 22(ಹಿ.ಸ.)
ಆ್ಯಂಕರ್:ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷೆಗಳ ವಿಳಂಬ, ನೇಮಕಾತಿ ಪ್ರಕ್ರಿಯೆಯಲ್ಲಿನ ಅನಿಶ್ಚಿತತೆ, ಶಿಕ್ಷಣ ವೆಚ್ಚದ ಏರಿಕೆ ಹಾಗೂ ನಿರುದ್ಯೋಗ ಸೇರಿದಂತೆ ವಿದ್ಯಾರ್ಥಿಗಳ ಸಮಸ್ಯೆಗಳ ಕುರಿತು ನಡೆಯುತ್ತಿರುವ ‘ವಿದ್ಯಾರ್ಥಿಗಳ ಧ್ವನಿ’ ಅಭಿಯಾನವನ್ನು ದೇಶಾದ್ಯಂತ ವಿಸ್ತರಿಸಲು ಕಾಂಗ್ರೆಸ್ ನಿರ್ಧರಿಸಿದೆ. ಇದರ ಅಂಗವಾಗಿ ಜುಲೈ 23ರಂದು ದೇಶದಾದ್ಯಂತ ಕಾಲೇಜುಗಳು, ವಿಶ್ವವಿದ್ಯಾಲಯಗಳು, ತರಬೇತಿ ಕೇಂದ್ರಗಳು, ವಿದ್ಯಾರ್ಥಿ ವಸತಿನಿಲಯಗಳು ಹಾಗೂ ಇತರೆ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷ ‘ವಿದ್ಯಾರ್ಥಿ ಸಂವಾದ’ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಕಾಂಗ್ರೆಸ್ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಬುಧವಾರ ಪ್ರಕಟಣೆ ನೀಡಿ, ದೇಶದ ವಿದ್ಯಾರ್ಥಿಗಳು ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ವಿಷಯಗಳನ್ನು ಕಾಂಗ್ರೆಸ್ ನಿರಂತರವಾಗಿ ಪ್ರಸ್ತಾಪಿಸುತ್ತಿದ್ದು, ಇದೀಗ ನೇರವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುವ ಮೂಲಕ ಅವರ ಧ್ವನಿಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರು ಜೂನ್ 17ರಂದು ರಾಜಸ್ಥಾನದ ಕೋಟಾದಲ್ಲಿ ‘ವಿದ್ಯಾರ್ಥಿಗಳ ಧ್ವನಿ’ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಬಳಿಕ ಜುಲೈ 17ರಂದು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ ಅಭಿಯಾನವನ್ನು ಮುಂದುವರಿಸಲಾಯಿತು. ಶಿಕ್ಷಣ ವ್ಯವಸ್ಥೆಯನ್ನು ಭ್ರಷ್ಟಾಚಾರ, ಶೋಷಣೆ ಹಾಗೂ ಅವ್ಯವಸ್ಥೆಯಿಂದ ಮುಕ್ತಗೊಳಿಸುವುದು ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳನ್ನು ರಾಷ್ಟ್ರೀಯ ಚರ್ಚೆಯ ಭಾಗವಾಗಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ವೇಣುಗೋಪಾಲ್ ಹೇಳಿದರು.
ಜುಲೈ 21ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಇತರ ವಿರೋಧ ಪಕ್ಷದ ನಾಯಕರು ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮವನ್ನು ಖಂಡಿಸಿ ಪ್ರಧಾನಿ ನಿವಾಸದ ಎದುರು ಶಾಂತಿಯುತ ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಾಯಕರು ಹಾಗೂ ಕಾರ್ಯಕರ್ತರ ಮೇಲೆ ಪೊಲೀಸರು ಬಲಪ್ರಯೋಗ ನಡೆಸಿದರು ಎಂದು ಅವರು ಆರೋಪಿಸಿದರು.
ದೇಶದಾದ್ಯಂತ ನಡೆಯುವ ವಿದ್ಯಾರ್ಥಿ ಸಂವಾದ ಕಾರ್ಯಕ್ರಮಗಳಲ್ಲಿ ಕಾಂಗ್ರೆಸ್ ನಾಯಕರು ವಿದ್ಯಾರ್ಥಿಗಳೊಂದಿಗೆ ನೇರವಾಗಿ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ರಾಹುಲ್ ಗಾಂಧಿಯವರ ‘ವಿದ್ಯಾರ್ಥಿಗಳ ಧ್ವನಿ’ ಅಭಿಯಾನದ ಉದ್ದೇಶಗಳನ್ನು ವಿವರಿಸಲಿದ್ದು, ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪಗಳು, ನೇಮಕಾತಿ ಪ್ರಕ್ರಿಯೆಯ ಅಕ್ರಮಗಳು ಹಾಗೂ ನಿರುದ್ಯೋಗದ ಕುರಿತು ಚರ್ಚೆ ನಡೆಸಲಿದ್ದಾರೆ.
ಪಕ್ಷದ ನಾಯಕರು ಹಾಗೂ ಪದಾಧಿಕಾರಿಗಳು ತಮ್ಮ ವ್ಯಾಪ್ತಿಯ ನಗರ ಸಂಯೋಜಕರೊಂದಿಗೆ ಸಂಪರ್ಕ ಸಾಧಿಸಿ ನಿಗದಿತ ಸ್ಥಳಗಳಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕಾಂಗ್ರೆಸ್ ಸೂಚಿಸಿದೆ. ಕಾರ್ಯಕ್ರಮದ ವೇಳೆ ಪತ್ರಿಕಾಗೋಷ್ಠಿ ಆಯೋಜಿಸಲಾಗುವುದು. ರಾಹುಲ್ ಗಾಂಧಿಯವರ ಕೋಟಾ ಭಾಷಣದ ವೀಡಿಯೊ ಪ್ರದರ್ಶಿಸಲಾಗುವುದು. ಶಿಕ್ಷಣ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಲಾಗುವುದು.
ಅಭಿಯಾನದ ಉದ್ದೇಶಗಳು, ಪ್ರಮುಖ ಬೇಡಿಕೆಗಳು ಹಾಗೂ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ, ಅಭಿಯಾನದ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಂಡು ಸಕ್ರಿಯವಾಗಿ ಭಾಗವಹಿಸುವಂತೆ ಪ್ರೋತ್ಸಾಹಿಸುವಂತೆ ಪಕ್ಷ ಸೂಚಿಸಿದೆ. ಈ ಸಂವಾದ ಏಕಮುಖವಾಗಿರದೆ, ವಿದ್ಯಾರ್ಥಿಗಳು ತಮ್ಮ ಅನುಭವ, ಸಮಸ್ಯೆಗಳು, ಸಲಹೆಗಳು ಹಾಗೂ ಆಶಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ವೇದಿಕೆಯಾಗಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಯುವಜನರು ಹಾಗೂ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸರ್ಕಾರದ ಉತ್ತರದಾಯಿತ್ವವನ್ನು ಖಚಿತಪಡಿಸುವುದು, ಶಿಕ್ಷಣ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಮರುಸ್ಥಾಪಿಸುವುದು ಹಾಗೂ ಉದ್ಯೋಗ ಸಮಸ್ಯೆಗಳಿಗೆ ಆದ್ಯತೆ ನೀಡುವಂತೆ ದೇಶವ್ಯಾಪಿ ಜನಾಭಿಪ್ರಾಯ ರೂಪಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಕಾಂಗ್ರೆಸ್ ತಿಳಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.