
ಗುವಾಹಟಿ, ಜುಲೈ 22(ಹಿ.ಸ):
ಆ್ಯಂಕರ್:
ಅಸ್ಸಾಂ ಹಾಗೂ ನೆರೆಯ ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಸೇರಿದಂತೆ ಈಶಾನ್ಯ ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಎಸ್‌ಡಿಎಂಎ) ಬಿಡುಗಡೆ ಮಾಡಿದ ವರದಿ ಪ್ರಕಾರ, ಕಳೆದ ಒಂದೇ ದಿನದಲ್ಲಿ 21 ಮಂದಿ ಮೃತಪಟ್ಟಿದ್ದು, ರಾಜ್ಯದಲ್ಲಿ ಪ್ರವಾಹದಿಂದ ಮೃತಪಟ್ಟವರ ಒಟ್ಟು ಸಂಖ್ಯೆ 34ಕ್ಕೆ ಏರಿಕೆಯಾಗಿದೆ.
ಬ್ರಹ್ಮಪುತ್ರ (ನಿಮಾತಿಘಾಟ್), ಬುಢೀದಿಹಿಂಗ್ (ಚೆನಿಮಾರಿ, ಖೋವಾಂಗ್), ಧನಸಿರಿ (ಗೋಲಾಘಾಟ್, ನುಮಾಲಿಗಢ್) ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ದಿಖೌ ಮತ್ತು ದಿಸಾಂಗ್ ನದಿಗಳಲ್ಲಿಯೂ ನೀರಿನ ಮಟ್ಟ ಅಪಾಯದ ಮಟ್ಟಕ್ಕಿಂತ ಹೆಚ್ಚಾಗಿದೆ.
ಪ್ರಸ್ತುತ ಗೋಲಾಘಾಟ್, ಕಾಮರೂಪ್, ಹೋಜಾಯಿ, ಡಿಬ್ರುಗಢ್, ಬಿಸ್ವನಾಥ್, ಧೇಮಾಜಿ, ಶೋಣಿತ್ಪುರ, ಉದಾಲ್ಗುರಿ, ನಾಗಾಂವ್, ಚರೈದೇವ್, ಕಾಮರೂಪ್ ಮೆಟ್ರೋ, ಜೋರ್ಹಾಟ್, ತಿನ್ಸುಕಿಯಾ, ಕಾರ್ಬಿ ಆಂಗ್ಲಾಂಗ್, ಲಖಿಂಪುರ್ ಹಾಗೂ ಶಿವಸಾಗರ್ ಸೇರಿದಂತೆ 16 ಜಿಲ್ಲೆಗಳು ಪ್ರವಾಹದ ತೀವ್ರ ಪರಿಣಾಮಕ್ಕೆ ಒಳಗಾಗಿವೆ. 44 ಕಂದಾಯ ವಲಯಗಳ ವ್ಯಾಪ್ತಿಯ 872 ಗ್ರಾಮಗಳು ಜಲಾವೃತಗೊಂಡಿದ್ದು, 5,64,660 ಜನರು ಹಾಗೂ 24,210 ಹೆಕ್ಟೇರ್‌ಗೂ ಅಧಿಕ ಕೃಷಿಭೂಮಿ ನೀರಿನಲ್ಲಿ ಮುಳುಗಿದೆ.
ಪ್ರವಾಹ ಸಂತ್ರಸ್ತರಿಗಾಗಿ ರಾಜ್ಯ ಸರ್ಕಾರ 71 ಪರಿಹಾರ ಶಿಬಿರಗಳು ಹಾಗೂ 202 ಪರಿಹಾರ ವಿತರಣಾ ಕೇಂದ್ರಗಳನ್ನು ಸೇರಿ ಒಟ್ಟು 273 ಕೇಂದ್ರಗಳನ್ನು ಆರಂಭಿಸಿದೆ. ಪರಿಹಾರ ಶಿಬಿರಗಳಲ್ಲಿ 12,284 ಮಂದಿ ಆಶ್ರಯ ಪಡೆದಿದ್ದು, 1,00,318 ಮಂದಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗಿದೆ.
ಜುಲೈ 21ರಂದು ಮೃತಪಟ್ಟ 21 ಮಂದಿಯಲ್ಲಿ ಗೋಲಾಘಾಟ್‌ನಲ್ಲಿ 2, ಜೋರ್ಹಾಟ್‌ನಲ್ಲಿ 1, ಚರೈದೇವ್‌ನಲ್ಲಿ 5 ಹಾಗೂ ಶಿವಸಾಗರ್‌ನಲ್ಲಿ 13 ಮಂದಿ ಸೇರಿದ್ದಾರೆ.
ಪ್ರವಾಹದಿಂದ 1,85,029 ಸಾಕುಪ್ರಾಣಿಗಳಿಗೂ ತೀವ್ರ ಹಾನಿಯಾಗಿದ್ದು, 61,747 ದೊಡ್ಡ ಜಾನುವಾರುಗಳು, 92,578 ಸಣ್ಣ ಜಾನುವಾರುಗಳು ಹಾಗೂ 30,704 ಕೋಳಿಗಳು ಪರಿಣಾಮಕ್ಕೊಳಗಾಗಿವೆ. ಇದಲ್ಲದೆ 107 ಪ್ರಾಣಿಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ.
ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಪೊಲೀಸರು, ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ, ಸ್ಥಳೀಯ ಆಡಳಿತ ಹಾಗೂ ಸ್ವಯಂಸೇವಕರು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 89 ವೈದ್ಯಕೀಯ ತಂಡಗಳನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ನಿಯೋಜಿಸಲಾಗಿದ್ದು, 50 ದೋಣಿಗಳ ಮೂಲಕ 6,101 ಜನರು ಹಾಗೂ 20 ಪ್ರಾಣಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ತೀವ್ರವಾಗಿ ಹಾನಿಗೊಳಗಾದ ಶಿವಸಾಗರ್ ಜಿಲ್ಲೆಯಲ್ಲಿ ಪರಿಹಾರ ಕಾರ್ಯಕ್ಕಾಗಿ ಎರಡು ಹೆಲಿಕಾಪ್ಟರ್‌ಗಳನ್ನು ಕೂಡ ನಿಯೋಜಿಸಲಾಗಿದೆ.
ಸಂತ್ರಸ್ತರಿಗೆ 5,011 ಕ್ವಿಂಟಲ್ ಅಕ್ಕಿ, 956 ಕ್ವಿಂಟಲ್ ಬೇಳೆ, 265 ಕ್ವಿಂಟಲ್ ಉಪ್ಪು, 20,115 ಲೀಟರ್ ಸಾಸಿವೆ ಎಣ್ಣೆ ಸೇರಿದಂತೆ ಜಾನುವಾರುಗಳಿಗೆ ಮೇವು ವಿತರಿಸಲಾಗಿದೆ. ಪ್ರವಾಹದಿಂದ ರಸ್ತೆ, ಸೇತುವೆಗಳು ಹಾಗೂ ಇತರ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದ್ದು, ಪರಿಸ್ಥಿತಿಯ ಮೇಲೆ ರಾಜ್ಯ ಸರ್ಕಾರ ನಿಗಾ ವಹಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.