
ವಿಜಯಪುರ, 21 ಜುಲೈ (ಹಿ.ಸ.)
ಆ್ಯಂಕರ್ : ರಾಜ್ಯದಲ್ಲಿ ಮುಂಗಾರು ಮಳೆಯ ತೀವ್ರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಜಲಾಶಯಗಳಿಗೆ ನೀರಿನ ಹರಿವು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ವಿಜಯಪುರ ಜಿಲ್ಲೆಯ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಆಲಮಟ್ಟಿ ಅಣೆಕಟ್ಟಿಗೆ ಪ್ರಸ್ತುತ 40,173 ಕ್ಯೂಸೆಕ್ ನೀರು ಒಳಹರಿವಾಗಿ ದಾಖಲಾಗಿದ್ದು, ಜಲಾಶಯದಲ್ಲಿ 94.64 ಟಿಎಂಸಿ ನೀರು ಸಂಗ್ರಹವಾಗಿದೆ ಎಂದು ಕೃಷ್ಣ ಭಾಗ್ಯ ನಿಗಮದ ಅಧಿಕಾರಿಗಳು ತಿಳಿಸಿದರು.
ರಾಜ್ಯದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಉತ್ತಮ ಮಳೆಯ ಪರಿಣಾಮವಾಗಿ ಕಾವೇರಿ, ಕೃಷ್ಣಾ, ತುಂಗಭದ್ರಾ ಹಾಗೂ ಮಲೆನಾಡು ಭಾಗಗಳ ಪ್ರಮುಖ ಜಲಾಶಯಗಳ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜ್ಯದ 14 ಪ್ರಮುಖ ಜಲಾಶಯಗಳಿಗೆ ಒಟ್ಟಾರೆ 1 ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬರುತ್ತಿದೆ.
ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಏರಿಕೆಯಾಗುತ್ತಿರುವುದು ಉತ್ತರ ಕರ್ನಾಟಕದ ವಿಜಯಪುರ, ಬಾಗಲಕೋಟೆ, ಯಾದಗಿರಿ, ಕಲಬುರಗಿ ಸೇರಿದಂತೆ ಹಲವು ಜಿಲ್ಲೆಗಳ ರೈತರಿಗೆ ಆಶಾದಾಯಕ ಬೆಳವಣಿಗೆಯಾಗಿದೆ. ಮುಂಗಾರು ಮತ್ತಷ್ಟು ಬಲಗೊಂಡರೆ ಜಲಾಶಯವು ಶೀಘ್ರದಲ್ಲೇ ಇನ್ನಷ್ಟು ನೀರು ಸಂಗ್ರಹಿಸಿಕೊಳ್ಳುವ ಸಾಧ್ಯತೆ ಇದೆ.
ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಜಲಾಶಯಗಳ ನೀರಿನ ಮಟ್ಟವನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದು, ಒಳಹರಿವಿನ ಪ್ರಮಾಣದಲ್ಲಿ ಏರಿಳಿತಕ್ಕೆ ಅನುಗುಣವಾಗಿ ನೀರಿನ ನಿರ್ವಹಣೆ ಕೈಗೊಳ್ಳಲಾಗುತ್ತಿದೆ. ಮುಂಗಾರು ಇದೇ ರೀತಿ ಮುಂದುವರಿದರೆ ನೀರಾವರಿ, ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಗೆ ಅಗತ್ಯವಾದ ನೀರಿನ ಲಭ್ಯತೆ ಮತ್ತಷ್ಟು ಬಲವಾಗಲಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande