
ಗದಗ, 01 ಜುಲೈ (ಹಿ.ಸ.)
ಆ್ಯಂಕರ್:- ಭಾರತ ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 (ಸಂಬಂಧ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಅದರಂತೆ ಗದಗ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಜೂನ್ 30ರಿಂದ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ ಮತದಾರರ ಮಾಹಿತಿ ಸಂಗ್ರಹಿಸುವ ಕಾರ್ಯ ಆರಂಭಿಸಿದ್ದಾರೆ. ಮತದಾರರ ಪಟ್ಟಿಯನ್ನು ಮತ್ತಷ್ಟು ನಿಖರ ಹಾಗೂ ದೋಷರಹಿತಗೊಳಿಸುವ ಉದ್ದೇಶದಿಂದ ಈ ಸಮಗ್ರ ಪರಿಷ್ಕರಣೆ ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಚುನಾವಣಾ ಆಯೋಗದ ಈ ಮಹತ್ವದ ಪ್ರಕ್ರಿಯೆಗೆ ಸಂಪೂರ್ಣ ಸಹಕಾರ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.
ಚುನಾವಣಾ ಆಯೋಗದ ವೇಳಾಪಟ್ಟಿಯ ಪ್ರಕಾರ ಜೂನ್ 30ರಿಂದ ಜುಲೈ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳು ಪ್ರತಿ ಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸುವುದರ ಜೊತೆಗೆ ಎನ್ಯೂಮರೇಷನ್ ಫಾರ್ಮ್ಗಳ ಮೂಲಕ ಅಗತ್ಯ ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಸಂಗ್ರಹಿಸಲಾದ ಮಾಹಿತಿಯನ್ನು ಚುನಾವಣಾ ಆಯೋಗದ ಅಧಿಕೃತ ಮೊಬೈಲ್ ಆ್ಯಪ್ನಲ್ಲಿ ದಾಖಲಿಸಲಾಗುವುದು. ಈ ಪ್ರಕ್ರಿಯೆಯಲ್ಲಿ ಮತದಾರರು ತಮ್ಮ ವೈಯಕ್ತಿಕ ವಿವರಗಳನ್ನು ಸರಿಯಾಗಿ ಒದಗಿಸಿ ಅಧಿಕಾರಿಗಳಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಇದೇ ಅವಧಿಯಲ್ಲಿ ಮತಗಟ್ಟೆಗಳ ಪುನರ್ವಿಂಗಡಣೆ ಕಾರ್ಯವೂ ಪೂರ್ಣಗೊಳ್ಳಲಿದ್ದು, ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಕರಡು ಪಟ್ಟಿಯ ಪ್ರಕಟಣೆಯ ನಂತರ ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಮತದಾರರು ತಮ್ಮ ಹೆಸರು ಸೇರ್ಪಡೆ, ಹೆಸರು ಕೈಬಿಡುವಿಕೆ, ತಿದ್ದುಪಡಿ ಸೇರಿದಂತೆ ವಿವಿಧ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸ್ವೀಕರಿಸಲಾದ ಅರ್ಜಿಗಳ ವಿಲೇವಾರಿ ಕಾರ್ಯ ಆಗಸ್ಟ್ 5ರಿಂದ ಅಕ್ಟೋಬರ್ 3ರವರೆಗೆ ನಡೆಯಲಿದ್ದು, ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ನಂತರ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
ಮತದಾರರಿಗೆ ಯಾವುದೇ ತೊಂದರೆ ಆಗದಂತೆ ಜಿಲ್ಲೆಯಾದ್ಯಂತ ಅಗತ್ಯ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ವೋಟರ್ ಫೆಸಿಲಿಟೇಶನ್ ಸೆಂಟರ್ ಸ್ಥಾಪಿಸಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ತಹಶೀಲ್ದಾರರ ಕಚೇರಿ, ತಾಲೂಕು ಪಂಚಾಯಿತಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಲ್ಲಿ ಬಿಎಲ್ಒ ಫೆಸಿಲಿಟೇಶನ್ ಸೆಂಟರ್ ಗಳನ್ನು ಆರಂಭಿಸಲಾಗಿದೆ. ಈ ಕೇಂದ್ರಗಳಲ್ಲಿ ಮತದಾರರು ಅಗತ್ಯ ಮಾಹಿತಿ ಪಡೆಯುವುದರ ಜೊತೆಗೆ ತಮ್ಮ ಅರ್ಜಿಗಳನ್ನು ಸಲ್ಲಿಸಲು ಸಹ ಅವಕಾಶವಿದೆ.
ಇದಲ್ಲದೆ, ಜಿಲ್ಲಾ ಮಟ್ಟದಲ್ಲಿ ಮತದಾರರ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಸರ್ಕಾರಿ ಕೆಲಸದ ದಿನಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರು 1950 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮತದಾರರ ಪಟ್ಟಿಗೆ ಸಂಬಂಧಿಸಿದ ಮಾಹಿತಿ ಪಡೆಯಬಹುದಾಗಿದೆ. ಜಿಲ್ಲಾ ಸಹಾಯವಾಣಿ ಕೇಂದ್ರದ ನೋಡಲ್ ಅಧಿಕಾರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಮೆಹಬೂಬ ತುಂಬರಮಟ್ಟಿ ಅವರನ್ನು ನೇಮಕ ಮಾಡಲಾಗಿದೆ.
ಮತದಾರರ ನೋಂದಣಾಧಿಕಾರಿಗಳಾಗಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಪ್ರತ್ಯೇಕ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಶಿರಹಟ್ಟಿ ವಿಧಾನಸಭಾ ಕ್ಷೇತ್ರಕ್ಕೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಾ. ನಂದಾ ಹಣಬರಟ್ಟಿ, ಗದಗ ವಿಧಾನಸಭಾ ಕ್ಷೇತ್ರಕ್ಕೆ ಉಪವಿಭಾಗಾಧಿಕಾರಿ ಗಂಗಪ್ಪ ಎಂ., ರೋಣ ವಿಧಾನಸಭಾ ಕ್ಷೇತ್ರಕ್ಕೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ ಹಾಗೂ ನರಗುಂದ ವಿಧಾನಸಭಾ ಕ್ಷೇತ್ರಕ್ಕೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಶಿವನಗೌಡ ಪಾಟೀಲ ಅವರನ್ನು ನೇಮಕ ಮಾಡಲಾಗಿದೆ. ಆಯಾ ತಾಲೂಕುಗಳ ತಹಶೀಲ್ದಾರರು ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.
ಇದರ ಜೊತೆಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆಯ ಮೇಲ್ವಿಚಾರಣೆಗಾಗಿ ಭಾರತ ಚುನಾವಣಾ ಆಯೋಗವು ಸರ್ಕಾರದ ಕಾರ್ಯದರ್ಶಿ ವಿಪುಲ ಬನ್ಸಲ್ ಅವರನ್ನು ಗದಗ ಜಿಲ್ಲೆಯ ಮತದಾರರ ಪಟ್ಟಿ ವೀಕ್ಷಕರಾಗಿ ನೇಮಕ ಮಾಡಿದೆ. ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಎ.ಎ. ಕಂಬಾಳಿಮಠ ಅವರನ್ನು ಜಿಲ್ಲಾ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ.
ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಅವರು, ಮತದಾರರ ಪಟ್ಟಿ ಪರಿಷ್ಕರಣೆ ಪ್ರಜಾಪ್ರಭುತ್ವದ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದ್ದು, ಪ್ರತಿಯೊಬ್ಬ ಅರ್ಹ ನಾಗರಿಕರು ಬಿಎಲ್ಒಗಳು ಮನೆಗೆ ಭೇಟಿ ನೀಡಿದಾಗ ಅಗತ್ಯ ದಾಖಲೆಗಳು ಹಾಗೂ ಮಾಹಿತಿ ನೀಡಿ ಸಹಕರಿಸಬೇಕು. ಕರಡು ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪದೋಷ ಕಂಡುಬಂದರೆ ನಿಗದಿತ ಅವಧಿಯೊಳಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಿ ತಮ್ಮ ಹೆಸರನ್ನು ಸರಿಪಡಿಸಿಕೊಳ್ಳುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP