
ಬೆಂಗಳೂರು, 01 ಜುಲೈ (ಹಿ.ಸ.):
ಆ್ಯಂಕರ್:
ರಾಜ್ಯ ಸರ್ಕಾರದ ಆಡಳಿತ ವೈಫಲ್ಯ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಮುಂದಿಟ್ಟುಕೊಂಡು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸನಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ ಅವರು, ಕಾಂಗ್ರೆಸ್ ಸರ್ಕಾರದ 'ಕರ್ನಾಟಕ ಮಾದರಿ ಆಡಳಿತ' ಎಂದರೆ ಲೂಟಿ ಮಾಡಿ, ಸಿಕ್ಕಿಬಿದ್ದು, ನಂತರ ಪರಿಶೀಲನಾ ಸಭೆ ನಡೆಸಿ, ಅಧಿಕಾರಿಗಳ ಮೇಲೆ ಆರೋಪ ಮಾಡಿ, ತಾವು ಪ್ರಾಮಾಣಿಕರು ಎಂದು ಬಿಂಬಿಸುವುದಾಗಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ, ನೀವು ಕರ್ನಾಟಕಕ್ಕೆ ಬಂದು ನಿಮ್ಮದೇ ಸರ್ಕಾರದ ರಾಜಕೀಯ ಸರ್ಕಸ್ನ್ನು ನೋಡಬೇಕು. ರಾಜ್ಯದ ಮಂತ್ರಿಗಳು ಮೊದಲು ಸರ್ಕಾರದ ಹಣ ದುರುಪಯೋಗವಾಗಲು ಅವಕಾಶ ಮಾಡಿಕೊಟ್ಟು, ಬಳಿಕ ಅದೇ ಸರ್ಕಾರದ ವಿರುದ್ಧ 'ಪ್ರಾಮಾಣಿಕರಂತೆ ವರ್ತಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರು ನಗರದಲ್ಲಿ 20 ಲಕ್ಷ ಸಸಿಗಳನ್ನು ನೆಟ್ಟಿರುವುದಾಗಿ ಸರ್ಕಾರ ಹೇಳಿಕೊಂಡಿದ್ದರೂ, ಪರಿಶೀಲನೆ ವೇಳೆ ಸುಮಾರು 11 ಲಕ್ಷ ಸಸಿಗಳ ಲೆಕ್ಕ ಸಿಗಲಿಲ್ಲ ಎಂದು ಆರೋಪಿಸಿರುವ ಅಶೋಕ್, ಒಂದು ಸಸಿ ನೆಡಲು ₹3,108 ವೆಚ್ಚ ಮಾಡಲಾಗಿದೆ ಎನ್ನುವುದು ಅಚ್ಚರಿಯ ಸಂಗತಿ ಎಂದು ಪ್ರಶ್ನಿಸಿದ್ದಾರೆ.
ಅದೇ ರೀತಿ, ಬೀದಿ ನಾಯಿಗಳ ಸಂತಾನಹರಣ ಯೋಜನೆಗೆ ₹42 ಕೋಟಿ ವೆಚ್ಚ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಆರೋಪಿಸಿದ ಅವರು, ಸಾರ್ವಜನಿಕ ಹಣದ ಬಳಕೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.
ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳ ಸಭೆಯಲ್ಲಿ ವ್ಯಕ್ತಪಡಿಸಿದ್ದ ಅಸಮಾಧಾನವನ್ನು ಉಲ್ಲೇಖಿಸಿದ ಅಶೋಕ್, ಮಂತ್ರಿಗಳೇ ಏನೋ ಗಂಭೀರ ತಪ್ಪಾಗಿದೆ ಎಂದು ಸಾರ್ವಜನಿಕವಾಗಿ ಒಪ್ಪಿಕೊಳ್ಳುತ್ತಿದ್ದರೆ, ಕಳೆದ ಮೂರು ವರ್ಷಗಳಿಂದ ಕರ್ನಾಟಕವನ್ನು ಯಾರು ಆಡಳಿತ ನಡೆಸುತ್ತಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಅಕ್ರಮಗಳು ಬೆಳಕಿಗೆ ಬಂದಾಗಲೆಲ್ಲಾ ಪರಿಶೀಲನಾ ಸಭೆ ನಡೆಸಿ ಅಧಿಕಾರಿಗಳ ಮೇಲೆ ಹೊಣೆ ಹೊರಿಸುವ ಬದಲು, ರಾಜಕೀಯ ನಾಯಕತ್ವ ತನ್ನ ಜವಾಬ್ದಾರಿಯನ್ನು ಸ್ವೀಕರಿಸಬೇಕು. ಅಧಿಕಾರಿಗಳು ನೀತಿಗಳನ್ನು ಅಥವಾ ಬಜೆಟ್ಗಳನ್ನು ಅನುಮೋದಿಸುವುದಿಲ್ಲ; ಅದನ್ನು ರಾಜಕೀಯ ಕಾರ್ಯಾಂಗವೇ ಮಾಡುತ್ತದೆ. ಹೀಗಾಗಿ ನಾಟಕ ನಿಲ್ಲಿಸಿ, ಅಧಿಕಾರಿಗಳನ್ನು ರಾಜಕೀಯ ಗುರಾಣಿಗಳಾಗಿ ಬಳಸುವುದನ್ನು ಬಿಡಿ. ಕರ್ನಾಟಕದ ಜನತೆಗೆ ಪರಿಶೀಲನಾ ಸಭೆಗಳಲ್ಲ, ಹೊಣೆಗಾರಿಕೆಯ ಆಡಳಿತ ಬೇಕಾಗಿದೆ ಎಂದು ಆರ್. ಅಶೋಕ್ ತಮ್ಮ ಎಕ್ಸ್ ಪೋಸ್ಟ್ನಲ್ಲಿ ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.