

ಕೊಪ್ಪಳ, 01 ಜುಲೈ (ಹಿ.ಸ.):
ಆ್ಯಂಕರ್ :‘ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯ ಅಪಾಯದ ಸ್ಥಿತಿಯಲ್ಲಿದ್ದು ಅನೇಕ ಸಮಸ್ಯೆಗಳು ಹಾಗೂ ಸವಾಲುಗಳ ನಡುವೆ ಕೆಲಸ ಮಾಡಬೇಕಾದ ಅನಿವಾರ್ಯತೆ ಪತ್ರಿಕೋದ್ಯಮದಲ್ಲಿ ಸೃಷ್ಟಿಯಾಗಿದೆ’ ಎಂದು ಹಿರಿಯ ಪತ್ರಕರ್ತ ಹೊನಕೆರೆ ನಂಜುಂಡೇಗೌಡ ಕಳವಳ ವ್ಯಕ್ತಪಡಿಸಿದರು.
ಕೊಪ್ಪಳ ಮೀಡಿಯಾ ಕ್ಲಬ್ ಇಲ್ಲಿನ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ‘ಬದಲಾದ ಪರಿಸ್ಥಿತಿಯಲ್ಲಿ ಪತ್ರಕರ್ತರಿಗೆ ನಿರ್ಭೀತಿಯಿಂದ ಬರೆಯುವ ಪರಿಸ್ಥಿತಿಯಿಲ್ಲ. ಪ್ರಶ್ನೆ ಕೇಳುವುದು ಕೂಡ ಕಡಿಮೆಯಾಗುತ್ತಿದೆ. ಎಷ್ಟೇ ಸಂದಿಗ್ದತೆಯಿದ್ದರೂ ವೃತ್ತಿಭದ್ರತೆಯಿಂದ ಪತ್ರಕರ್ತ ಪ್ರಶ್ನೆ ಕೇಳುವುದನ್ನು ಬಿಡಬಾರದು. ಪತ್ರಿಕಾರಂಗ ಹಾಗೂ ಅದರ ಮೌಲ್ಯಗಳನ್ನು ಗೌರವಿಸಬೇಕು’ ಎಂದರು.
ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಬರುತ್ತಿದ್ದು ಆತಂಕದಲ್ಲಿ ಕೆಲಸ ಮಾಡಬೇಕಾಗಿದೆ. ತನಿಖಾ ಪತ್ರಿಕೋದ್ಯಮ ಸತ್ತು ಹೋಗಿದೆ. ಯುವಜನತೆ ಗಟ್ಟಿತನದ ಪತ್ರಿಕೋದ್ಯಮ ಉಳಿಸುವ ಬದ್ದತೆ ತೋರಬೇಕು. ಪತ್ರಕರ್ತ ನಿರ್ಭೀತವಾಗಿ ಪ್ರಶ್ನೆ ಮಾಡಿದರೆ ಅಲ್ಪವಾದರೂ ಸಮಾಜ ಸುಧಾರಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಇದೇ ವೇಳೆ ಹಿರಿಯ ಪತ್ರಕರ್ತ ಆನಂದ ಬೈದನಮನೆ ಮಾತನಾಡಿ ‘ಪತ್ರಿಕೋದ್ಯಮದಲ್ಲಿ 25 ವರ್ಷಗಳ ಸಾರ್ಥಕ ಸೇವೆ ಗುರುತಿಸಿ ಪ್ರಶಸ್ತಿ ನೀಡಿದ್ದಕ್ಕೆ ಖಷಿಯಾಗಿದೆ. ವೃತ್ತಿ ಬದುಕಿನ ದೈನಂದಿನ ಸವಾಲುಗಳ ನಡುವೆಯೂ ವೈಯಕ್ತಿಕ ಖುಷಿಗಳನ್ನು ತ್ಯಾಗ ಮಾಡಿ ಕೆಲಸ ಮಾಡಬೇಕಾಗಿದೆ. ಪತ್ರಿಕೋದ್ಯಮ ಹಾಗೂ ಮೌಲ್ಯದ ಸ್ವರೂಪಗಳು ಬದಲಾವಣೆಯಾಗಿವೆ. ಮಾಧ್ಯಮ ರಂಗ ಉದ್ಯಮವಾದ ಕಾರಣ ಅನೇಕ ಸಮಸ್ಯೆ ಹಾಗೂ ಸಂಕಷ್ಟಗಳನ್ನು ಎದುರಿಸುವಂತಾಗಿದೆ. ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಸರ್ಕಾರ ಮೊದಲಿನ ಹಾಗೆ ಈಗ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ದಪ್ಪ ಹೊಸಮನಿ ಮಾತನಾಡಿ ‘ಎಲ್ಲರೂ ಸರಿಯಾಗಿ ಪತ್ರಿಕಾ ವೃತ್ತಿಯನ್ನು ನಿರ್ವಹಣೆ ಮಾಡುತ್ತಿದ್ದೇವೆಯೇ ಎನ್ನುವದನ್ನು ಅವಲೋಕನ ಮಾಡಿಕೊಳ್ಳಬೇಕಾಗಿದೆ. ಸಾಮಾಜಿಕ ತಾಣಗಳಲ್ಲಿ ಬರುವ ಸಣ್ಣ ಮಾಹಿತಿಯೂ ದೊಡ್ಡ ಸುದ್ದಿಯಾಗಿ ಮಹತ್ವ ಪಡೆದುಕೊಳ್ಳುತ್ತಿವೆ. ಈಗ ನಮ್ಮ ಅಂಗೈಯಲ್ಲಿರುವ ಮೊಬೈಲ್ ಸುದ್ದಿಯ ಮೂಲವಾಗಿದೆ. ಇಷ್ಟೆಲ್ಲ ಸುದ್ದಿಗಳ ಸರಕಿನ ನಡುವೆಯೂ ವೃತ್ತಿಪರತೆ ಕಾಯ್ದುಕೊಳ್ಳುವ ಸವಾಲು ನಿಮ್ಮೆಲ್ಲರ ಮೇಲಿದೆ’ ಎಂದು ಹೇಳಿದರು.
ಕೊಪ್ಪಳ ಮೀಡಿಯಾ ಕ್ಲಬ್ ಅಧ್ಯಕ್ಷ ದೇವು ನಾಗನೂರು ಮಾತನಾಡಿ ’ಕ್ಲಬ್ ಸದಸ್ಯರ ಹಿತರಕ್ಷಣೆಗಾಗಿ ಅನೇಕ ಕೆಲಸಗಳನ್ನು ಮಾಡಲಾಗಿದೆ. ಸದಸ್ಯರಿಗೆ ಆರೋಗ್ಯ ತಪಾಸಣೆ, ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಕ್ಲಬ್ ಎಲ್ಲ ಸದಸ್ಯರು ಸೇರಿಕೊಂಡು ಸಮಾಜಮುಖಿ ಪತ್ರಿಕೋದ್ಯಮ ಮಾಡುತ್ತಿದ್ದೇವೆ’ ಎಂದು ಹೇಳಿದರು.
ವಾರ್ಷಿಕ ಪ್ರಶಸ್ತಿ ಪ್ರದಾನ
ಅನ್ವಿತಾ ಮಹಿಳೆಯರ ವೃದ್ಧರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ರೇವಣಕಿ ಪ್ರಾಯೋಜಕತ್ವದಲ್ಲಿ ಕ್ಲಬ್ ವತಿಯಿಂದ ನೀಡಲಾಗುವ ವಾರ್ಷಿಕ ಪ್ರಶಸ್ತಿಯನ್ನು ಈ ಬಾರಿ ಸುವರ್ಣ ಸುದ್ದಿ ವಾಹಿನಿಯ ಪೊಲಿಟಿಕಲ್ ಬ್ಯೂರೊ ಮುಖ್ಯಸ್ಥ ಆನಂದ ಬೈದನಮನೆ ಅವರಿಗೆ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಅವರು ಪ್ರದಾನ ಮಾಡಿದರು. ಪ್ರಶಸ್ತಿಯು ₹5 ಸಾವಿರ ನಗದು ಹಾಗೂ ಪುರಸ್ಕಾರ ಹೊಂದಿದ್ದು, ಸಂಸ್ಥೆಯ ಅಧ್ಯಕ್ಷ ಸುನಿಿಲ್ ಕುಮಾರ ಬೆಲ್ಲರ ಪಾಲ್ಗೊಂಡಿದ್ದರು.
ಕ್ಲಬ್ನ ಹಿರಿಯ ಪತ್ರಕರ್ತ ಶರಣಬಸವ ಹುಲಿಹೈದರ, ಹಿಂದಿನ ಒಂದು ವರ್ಷದಲ್ಲಿ ವಿವಿಧ ಪ್ರಶಸ್ತಿಗಳಿಗೆ ಭಾಜನರಾದ ಛಾಯಾಗ್ರಾಹಕರಾದ ಪ್ರಕಾಶ ಕಂದಕೂರ, ನಾಭಿರಾಜ ದಸ್ತೇನವರ ಅವರಿಗೆ ಸನ್ಮಾನಿಸಲಾಯಿತು. ಭರತ್ ಕಂದಕೂರ ಅನುಪಸ್ಥಿತಿಯಲ್ಲಿ ಅವರ ಪತ್ನಿ ಸುಧಾ ಕಂದಕೂರ ಸನ್ಮಾನ ಸ್ವೀಕರಿಸಿದರು.
ಪತ್ರಕರ್ತರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಲು ನೆರವಾದ ಕೆ.ಎಸ್. ಆಸ್ಪತ್ರೆಯ ಮುಖ್ಯಸ್ಥ ಡಾ. ಬಸವರಾಜ ಕ್ಯಾವಟರ್ ಅವರನ್ನು ಸನ್ಮಾನಿಸಲಾಯಿತು. ಪತ್ರಿಕಾ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ವಿಜೇತರಾದ ಕ್ಲಬ್ ಸದಸ್ಯರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಲಾವಿದೆ ಶಕುಂತಲಾ ಬೆನ್ನಾಳ ಹಾಗೂ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಪತ್ರಿಕಾ ವಿತರಕ ನಾಗರಾಜ ಕಲಾಲ್ ಅವರನ್ನೂ ಸನ್ಮಾನಿಸಲಾಯಿತು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್