
ಬೆಂಗಳೂರು, 01 ಜುಲೈ (ಹಿ.ಸ.):
ಆ್ಯಂಕರ್:
ಬೆಂಗಳೂರಿನ ಗಾಂಧೀಭವನದಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾಜಿ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದರು.
ಮಾಧ್ಯಮ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು. ಮಹಾತ್ಮಾ ಗಾಂಧಿ, ನೆಹರು, ಅಂಬೇಡ್ಕರ್ ಮುಂತಾದವರು ಈ ವೃತ್ತಿಯಿಂದಲೇ ಬಂದು ಜನರ, ದೇಶದ ಸೇವೆ ಮಾಡಿದವರು. ಮಾಧ್ಯಮ, ಸರ್ಕಾರ ಮತ್ತು ಜನರ ಮಧ್ಯೆ ಇರುವ ಸೇತು. ಜನರ ಅಭಿಪ್ರಾಯಗಳನ್ನು ಸರ್ಕಾರಕ್ಕೆ ತಿಳಿಸುವುದು, ಸರ್ಕಾರದ ನೀತಿ ನಿಯಮಗಳನ್ನು ಜನರಿಗೆ ತಲುಪಿಸುವ ಮುಖ್ಯ ಕಾರ್ಯ ಮಾಧ್ಯಮದಿಂದಲೇ ಆಗುತ್ತದೆ. ಮಾಧ್ಯಮ ಯಾರ ಒತ್ತಡಕ್ಕೂ ಮಣಿಯದೇ ಕೆಲಸ ಮಾಡಿದಾಗ ಮಾತ್ರ ವ್ಯವಸ್ಥೆ, ಸಮಾಜಕ್ಕೆ ಒಳ್ಳೆಯದಾಗುತ್ತದೆ ಎಂದರು.
ಕಳೆದ ಒಂದು ದಶಕದಲ್ಲಿ ಮಾಧ್ಯಮ ಅತ್ಯಂತ ವೇಗವಾಗಿ ಬದಲಾವಣೆ ಆಗಿದೆ. ಸಾಮಾಜಿಕ ಜಾಲತಾಣ ಬಂದ ಮೇಲಂತೂ ಮಾಧ್ಯಮಕ್ಕೆ ದೊಡ್ಡ ಸವಾಲೇ ಎದುರಾಗಿದೆ. ನಿಜವಾದ ಸುದ್ದಿ ಯಾವುದು ಎನ್ನುವುದನ್ನು ಸಾರ್ವಜನಿಕರು ತಿಳಿದುಕೊಳ್ಳುವುದು ಕಷ್ಟವಾಗಿದೆ. ಈಗ ಎಲ್ಲರೂ ಅಭಿಪ್ರಾಯ ವ್ಯಕ್ತಪಡಿಸುವವರೇ ಆಗಿದ್ದಾರೆ. ಆಕರ್ಷಣೀಯ ಸುದ್ದಿಗಳೇ ಪ್ರಾಧಾನ್ಯತೆ ಪಡೆದುಕೊಳ್ಳುತ್ತಿದೆ. ಮಾನವೀಯತೆಯ ಸುದ್ದಿ ಪ್ರಧಾನವಾಗಿ ಬರಬೇಕು. ವ್ಯಾಪಾರೀಕರಣವೂ ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದೆ. ಉದ್ದಿಮೆದಾರರು ಮಾಧ್ಯಮ ಸಂಸ್ಥೆಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಪತ್ರಿಕಾ ಸ್ವಾತಂತ್ರ್ಯ ಕಡಿಮೆ ಆಗುತ್ತಿದೆ ಎಂದು ಸರ್ವೇಗಳು ಹೇಳುತ್ತಿದೆ. ಒಟ್ಟಿನಲ್ಲಿ ಪಾರದರ್ಶಕ ಮಾಧ್ಯಮಗಳು ಸದಾ ಕಾಲವೂ ಉಳಿದುಕೊಳ್ಳುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನ್, ತೆಲಂಗಾಣ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ವಾರ್ತಾ ಇಲಾಖೆ ಆಯುಕ್ತ ಎಂ ಎನ್ ಅನುಚೇತ್, ಕೆಯುಡಬ್ಲುಜೆ ಅಧ್ಯಕ್ಷ
ಶಿವಾನಂದ ತಗಡೂರು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮುಂತಾದವರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.