ನಾಳೆ ಅಂಧ ಕಲಾವಿದರಿಂದ ಗಾನ ಸಿಂಚನ ಸಂಗೀತ ವೈಭವ
ಗದಗ, 01 ಜುಲೈ (ಹಿ.ಸ.): ಆ್ಯಂಕರ್: ಗದಗ ನಗರದ ಗಂಗಾಪುರ ಪೇಟೆಯ ಆರಾಧ್ಯ ದೈವವಾಗಿರುವ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವವು ಈ ಬಾರಿ ಭಕ್ತಿ, ಸಂಸ್ಕೃತಿ ಹಾಗೂ ಸಾಮಾಜಿಕ ಸೇವೆಯ ಅಪೂರ್ವ ಸಂಗಮವಾಗಿ ರೂಪುಗೊಂಡಿದ್ದು, ಜಾತ್ರಾ ಮಹೋತ್ಸವವು ಜುಲೈ 13ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮು
ಫೋಟೋ


ಗದಗ, 01 ಜುಲೈ (ಹಿ.ಸ.):

ಆ್ಯಂಕರ್: ಗದಗ ನಗರದ ಗಂಗಾಪುರ ಪೇಟೆಯ ಆರಾಧ್ಯ ದೈವವಾಗಿರುವ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವವು ಈ ಬಾರಿ ಭಕ್ತಿ, ಸಂಸ್ಕೃತಿ ಹಾಗೂ ಸಾಮಾಜಿಕ ಸೇವೆಯ ಅಪೂರ್ವ ಸಂಗಮವಾಗಿ ರೂಪುಗೊಂಡಿದ್ದು, ಜಾತ್ರಾ ಮಹೋತ್ಸವವು ಜುಲೈ 13ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.

ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಸಮಿತಿ–2026ರ ವತಿಯಿಂದ ಹಮ್ಮಿಕೊಳ್ಳಲಾಗಿರುವ ಈ ಮಹೋತ್ಸವದಲ್ಲಿ ಪ್ರತಿದಿನ ವಿಶೇಷ ಪೂಜಾ-ಕೈಂಕರ್ಯಗಳು, ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಕ್ತರಿಗಾಗಿ ವಿವಿಧ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಮಹೋತ್ಸವ ಸಮಿತಿಯ ಅಧ್ಯಕ್ಷ ಸಿದ್ದಪ್ಪ ಚ. ಪಲ್ಲೇದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾತ್ರೆಯ ಆರಂಭಿಕ ಹಂತದಲ್ಲಿ ದೇವಿಯ ಭವ್ಯ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ಅತ್ಯಂತ ಭಕ್ತಿ ಶ್ರದ್ಧೆಯಿಂದ ನೆರವೇರಿತು. ನೂರಾರು ಭಕ್ತರು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಪ್ರತಿಷ್ಠಾಪನಾ ಕಾರ್ಯಕ್ರಮದ ಯಶಸ್ಸಿನ ನಂತರ ಜಾತ್ರೆಯ ಪ್ರಮುಖ ಕಾರ್ಯಕ್ರಮಗಳಿಗೆ ವೇದಿಕೆ ಸಜ್ಜಾಗಿದ್ದು, ನಗರದಾದ್ಯಂತ ಧಾರ್ಮಿಕ ವಾತಾವರಣ ನಿರ್ಮಾಣವಾಗಿದೆ.

ಮಹೋತ್ಸವದ ಮುಂದಿನ ಪ್ರಮುಖ ಕಾರ್ಯಕ್ರಮಗಳಲ್ಲಿ ಜುಲೈ 4ರಂದು ವಿಶೇಷ ಕಳಸಾರೋಹಣ, ಜುಲೈ 7ರಂದು ಭಕ್ತಾದಿಗಳಿಂದ ಉಡಿ ತುಂಬುವ ಸೇವೆ, ಜುಲೈ 8ರಂದು ಧಾರ್ಮಿಕ ಇತಿಹಾಸ ಪ್ರಸಿದ್ಧ ಭವ್ಯ ಮಹಾರಥೋತ್ಸವ (ತೇರು ಎಳೆಯುವಿಕೆ), ಜುಲೈ 9ರಂದು ಲಕ್ಷ ದೀಪೋತ್ಸವ ಹಾಗೂ ಜುಲೈ 10ರಂದು ಸಾಮೂಹಿಕ ವಿವಾಹ ಮಹೋತ್ಸವ ಮತ್ತು ಮಹಾ ಅನ್ನಸಂತರ್ಪಣೆ ನೆರವೇರಲಿವೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಜಾತ್ರಾ ಮಹೋತ್ಸವದ ವಿಶೇಷ ಆಕರ್ಷಣೆಯಾಗಿ ಜುಲೈ 2ರಂದು ಗುರುವಾರ ಸಂಜೆ 6 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಭವ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಹೊಸಳ್ಳಿಯ ಬೂದೀಶ್ವರ ಸಂಸ್ಥಾನ ಮಠದ ಪೂಜ್ಯ ಅಭಿನವ ಜಗದ್ಗುರು ಶ್ರೀ ಬೂದೀಶ್ವರ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಮಹೋತ್ಸವ ಸಮಿತಿಯ ಅಧ್ಯಕ್ಷ ಸಿದ್ದಪ್ಪ ಚ. ಪಲ್ಲೇದ ಅಧ್ಯಕ್ಷತೆ ವಹಿಸಲಿದ್ದು, ಗದಗ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಎಸ್.ಯು. ಸಜ್ಜನಶೆಟ್ಟರ ಅವರು ಮುಖ್ಯ ಉಪನ್ಯಾಸ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ನಗರಸಭೆಯ ಮಾಜಿ ಉಪಾಧ್ಯಕ್ಷ ಶಂಕರ ಪ್ರ. ಹಾನಗಲ್, ಉದ್ಯಮಿ ವಿಜಯಕುಮಾರ ಗಡ್ಡಿ, ನಗರಸಭೆ ಸದಸ್ಯ ಮಹಾಂತೇಶ ನಲವಡಿ ಹಾಗೂ ಎಸ್.ಎಸ್.ಕೆ. ಸಮಾಜದ ಅಧ್ಯಕ್ಷ ಫಕೀರಸಾ ಭಾಂಡಗೆ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಭಾ ಕಾರ್ಯಕ್ರಮದ ನಂತರ ನಾಡಿನ ಹೆಸರಾಂತ 'ಶ್ರೀ ಸಿದ್ದಾರೂಢ ಗಾನ ಸಿಂಚನ ಕಲಾ ತಂಡ'ದ ಅಂಧ ಕಲಾವಿದರು ತತ್ವಪದಗಳು, ಸುಗಮ ಸಂಗೀತ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ. ತಮ್ಮ ಸುಮಧುರ ಗಾಯನ ಹಾಗೂ ವಿಶಿಷ್ಟ ಕಲಾ ಪ್ರದರ್ಶನಗಳ ಮೂಲಕ ರಾಜ್ಯದಾದ್ಯಂತ ಜನಮನ್ನಣೆ ಗಳಿಸಿರುವ ಈ ತಂಡದ ಕಾರ್ಯಕ್ರಮ ಜಾತ್ರೆಯ ಪ್ರಮುಖ ಆಕರ್ಷಣೆಯಾಗಿದ್ದು, ಸಂಗೀತಾಭಿಮಾನಿಗಳಿಗೆ ಅಪರೂಪದ ಸಾಂಸ್ಕೃತಿಕ ರಸದೌತಣ ನೀಡಲಿದೆ.

ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವವು ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೇ, ಸಾಂಸ್ಕೃತಿಕ ಪರಂಪರೆ, ಸಾಮಾಜಿಕ ಸಾಮರಸ್ಯ ಹಾಗೂ ಸೇವಾ ಮನೋಭಾವವನ್ನು ಪ್ರತಿಬಿಂಬಿಸುವ ಉತ್ಸವವಾಗಿ ಬೆಳೆಯುತ್ತಿದೆ. ವಿಶೇಷವಾಗಿ ಸಾಮೂಹಿಕ ವಿವಾಹ, ಅನ್ನಸಂತರ್ಪಣೆ, ಲಕ್ಷ ದೀಪೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮಾಜದ ವಿವಿಧ ವರ್ಗಗಳ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಕಾರ್ಯವನ್ನು ಮಹೋತ್ಸವ ಸಮಿತಿ ನಿರಂತರವಾಗಿ ಮಾಡುತ್ತಿದೆ.

ಜಾತ್ರಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಗದಗ ನಗರ ಹಾಗೂ ಜಿಲ್ಲೆಯ ಸಾರ್ವಜನಿಕರು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಆಶೀರ್ವಾದ ಪಡೆಯುವ ಮೂಲಕ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕು ಎಂದು ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಸಮಿತಿ ಮನವಿ ಮಾಡಿದೆ.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande