
ಗದಗ, 01 ಜುಲೈ (ಹಿ.ಸ.)
ಆ್ಯಂಕರ್:- ಗದಗ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ನಿಯಂತ್ರಣಕ್ಕಾಗಿ ಎಲ್ಲರೂ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಪ.ಜಾ/ ಪ.ಪಂ. ಜಿಲ್ಲಾ ಜಾಗೃತ ದೌರ್ಜನ್ಯ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿನ ಪ್ರತಿಷ್ಟಿತ ಶಾಲೆಗಳಲ್ಲಿ ಪ್ರವೇಶಾತಿ ಹೊಂದಿರುವ ಪ.ಜಾ ಹಾಗೂ ಪ.ಪಂಗಡದ ವಿದ್ಯಾರ್ಥಿಗಳಿಗೆ ಪಠ್ಯ ಹಾಗೂ ಪಠ್ಯೇತರ ವಿಷಯಗಳಲ್ಲಿ ಭಾಗವಹಿಸುವಂತೆ ಅವರನ್ನು ಪ್ರೋತ್ಸಾಹಿಸಬೇಕು. ಗುಣಮಟ್ಟದ ಶಿಕ್ಷಣವನ್ನು ಶಾಲಾ ಮಕ್ಕಳಿಗೆ ನೀಡುವುದು ಅತ್ಯವಶ್ಯಕವಾಗಿದ್ದು ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು. ಪರಿಶಿಷ್ಟ ಸಮುದಾಯ ಕಾಲೋನಿಗಳಲ್ಲಿ ರಸ್ತೆ, ವಿದ್ಯುತ್ ಪೂರೈಕೆ , ಸಮರ್ಪಕ ಕುಡಿಯುವ ನೀರಿನ ಪೂರೈಕೆ ಸೇರಿದಂತೆ ಮೂಲಭೂತ ಸೌಕರ್ಯಗಳು ಒದಗುವಂತೆ ನೋಡಿಕೊಳ್ಳಬೇಕು. ಪ.ಜಾ, ಪ.ಪಂ. ದೌರ್ಜನ್ಯ ಪ್ರಕರಣದಡಿ ಅರ್ಹ ಸಂತ್ರಸ್ಥರಿಗೆ ಪರಿಹಾರ ಧನ ಒದಗಿಸುವಲ್ಲಿ ವಿಳಂಬವಾಗಬಾರದು. ಅಧಿಕಾರಿಗಳು ಅರ್ಹರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಪ.ಜಾ ಪ.ಪಂ ಜನರಿಗೆ ತಲುಪಬೇಕಾದ ವಸತಿ. ವೈದ್ಯಕೀಯ. ಶಿಕ್ಷಣ ಸೇರಿದಂತೆ ವಿವಿಧ ಸೌಲಭ್ಯಗಳು ಅರ್ಹರಿಗೆ ಸಕಾಲದಲ್ಲಿಯೆ ದೊರಕಬೇಕು. ಫಲಾನುಭವಿಗಳ ಆಯ್ಕೆಪಟ್ಟಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಯಾವುದೇ ಕಾರಣಕ್ಕೂ ಸೌಲಬ್ಯಗಳ ವಿತರಣೆಯಲ್ಲಿ ದುರುಪಯೋಗವಾಗಬಾರದು. ಈ ನಿಟ್ಟಿನಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ವಿಶೇಷ ಆಸಕ್ತಿಯಿಂದ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಕಟ್ಟುನಿಟ್ಟಿನ ಸೂಚನೆ ನೀಡಿದರು
ಸಭೆಯ ಆರಂಭದಲ್ಲಿ ಹಿಂದಿನ ಸಭೆಯ ಅನುಪಾಲನಾ ವರದಿಯನ್ನು ಸಭೆಯ ಮುಂದೆ ಮಂಡಿಸಲಾಯಿತು.
ಈ ಸಂಧರ್ಭದಲ್ಲಿ ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ರೋಹನ್ ಜಗದೀಶ್, ಡಿವೈಎಸ್ಪಿ ಮಹಾಂತೇಶ ಸಜ್ಜನ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ಡಿಎಚ್ಒ ಡಾ.ಎಸ್. ಎಸ್ .ನೀಲಗುಂದ, ಡಿಡಿಪಿಐ ಆರ್.ಎಸ್.ಬುರುಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ರೀಮತಿ ರಾಧಾ ಮಣ್ಣೂರ, ನಾಮನಿರ್ದೇಶಿತ ಸದಸ್ಯರುಗಳಾದ ಶರೀಫ್ ಬಿಳೆಯಲಿ, ಸುರೇಶ ನಡುವಿನಮನಿ, ವಿನಾಯಕ ಬಳ್ಳಾರಿ, ತುಕ್ಕಪ್ಪ ಪೂಜಾರ, ಶ್ರೀನಿವಾಸ ದ್ಯಾವನೂರ, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ನಂದಾ ಹಣಬರಟ್ಟಿ ಸರ್ವರನ್ನು ಸ್ವಾಗತಿಸಿ ವಂದಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP