

ಕೊಪ್ಪಳ, 01 ಜುಲೈ (ಹಿ.ಸ.):
ಆ್ಯಂಕರ್ : ಬಲ್ಡೋಟ ಕ್ವಿಟ್ ಕೊಪ್ಪಳ ಧರಣಿ ವೇದಿಕೆಯಲ್ಲಿ 250ನೇ ದಿನದ 'ಕೊಪ್ಪಳ ಸಪ್ಪಳ ಆಂದೋಲನ'ದ ಪೂರ್ವಭಾವಿ ಸಭೆ ಯಶಸ್ವಿಯಾಗಿ ಜರುಗಿತು.
ಸಭೆಯಲ್ಲಿ ಮಾನವ ಬಂಧುತ್ವ ವೇದಿಕೆಯ ಹಿರಿಯ ಮುಖಂಡ ಶುಕರಾಜ ತಾಳಕೇರಿ ಮಾತನಾಡಿ ಈ ಹೋರಾಟ ಆರಂಭದ ದಿನದಿಂದ ಮಾನವ ಬಂಧುತ್ವ ವೇದಿಕೆ ಜೊತೆಗಿದೆ. ಜಿಲ್ಲೆಯ ರಾಜಕಾರಣಿಗಳು ಇಂತಹ ಜ್ವಲಂತ ಸಮಸ್ಯೆ ಬಗ್ಗೆ ಯೋಚನೆ ಮಾಡುತ್ತಿಲ್ಲ. ಆದ್ದರಿಂದ ಕಂಪನಿಗಳು ರಾಜಾರೋಷವಾಗಿ ಮಾಲಿನ್ಯ ಮಾಡುತ್ತಾ ನಿರುಮ್ಮಳವಾಗಿವೆ. ಈ ವರ್ಷ ಮಳೆ ಅಭಾವದಿಂದ ಕೃಷಿ ನಷ್ಟವಾಗುತ್ತಿದೆ. ತುಃಗಭದ್ರಾ ಹಿನ್ನೀರಿನ ಕಾರ್ಖಾನೆಗಳಿರುವ ಪ್ರದೇಶದಲ್ಲಿ ಕೊಳವೆ ಬಾವಿ ನೀರು ಬಳಸಿ ಕೃಷಿ ಮಾಡುವ ಕಾರ್ಖಾನೆ ಬಾಧಿತ ಹಳ್ಳಿಯ ರೈತರು ಧೂಳಿನಿಂದ ನಷ್ಟಕ್ಕೀಡಾಗುತ್ತಿದ್ದಾರೆ. ಇವರ ನೆರವಿಗೆ ಸರ್ಕಾರ ಬರಬೇಕಿದೆ. ಮಾಲಿನ್ಯ ನಿಯಂತ್ರಣ ಇಲಾಖೆ ಕಣ್ಮಿದ್ದು ಕುರುಡು, ಕಿವಿಯಿದ್ದು ಕಿವುಡಾಗಿದೆ. ಅದರ ಕಂಚಿನ ಕಿವಿ ತೆರೆಸಲು ಅನ್ನದ ತಟ್ಟೆ ಬಾರಿಸಿ ಜು. 7ರಂದು ಎಬ್ಬಿಸೋಣ. ಬಲ್ಡೋಟ ತನ್ನ ಮೊಂಡುತನದ ಚಾಳಿ ಮುಂದುವರೆಸಿದರೆ ನಗರದ ಲಕ್ಷಗಟ್ಟಲೆ ಜನರು ಸುಮ್ಮನೆ ಕೂಡಲು ಆಗದು. ಇದರ ನಿಜಾಂಶ ಅರಿತು ತನ್ನ ಬೃಹತ್ ಬಂಡವಾಳ ಹೂಡಿಕೆಯಿಂದ ಹಿಂದೆ ಸರಿಯಬೇಕು. ಈಗಿರುವ ಪೆಲ್ಲೆಟ್ ಘಟಕದ ಮಾಲಿನ್ಯವೇ ನಿಯಂತ್ರಣದಲ್ಲಿ ಇಲ್ಲ. 15 ವರ್ಷಗಳಿಂದ ಅಳವಡಿಸದ ತಂತ್ರಜ್ಞಾನ ಜಪ ಮಾಡಿ ಜನರನ್ನು ಯಾಮಾರಿಸಲು ಸಾಧ್ಯವಿಲ್ಲ. ಬಸಾಪುರ ಕೆರೆ ಕೇವಲ ಗೂಂಡಾಗಿರಿಯಿಂದ ತನ್ನ ವಶದಲ್ಲಿಟ್ಟುಕೊಂಡ ಬಲ್ಡೋಟ ಕಂಪನಿಗೆ ಇಷ್ಟರಲ್ಲೇ ಪಾಠ ಕಲಿಸುವ ರೈತರ ಚಳವಳಿ ನಡೆಯುತ್ತದೆ. ಅದರಲ್ಲಿ ಪಾಲ್ಗೊಂಡು ಕೆರೆಯನ್ನು ಗೆದ್ದುಕೊಳ್ಳೋಣ ಎಂದರು.
ಸಂಚಾಲಕ ಮಂಜುನಾಥ ಗೊಂಡಬಾಳ ಮಾತನಾಡಿ ಜು. 7ರ 'ಕೊಪ್ಪಳ ಸಪ್ಪಳ ಅಭಿಯಾನ'ಕ್ಕೆ ಬರುವ ಎಲ್ಲರೂ ತಮ್ಮೊಂದಿಗೆ ಉಣ್ಣುವ ತಟ್ಟಿ, ಬಾರಿಸಲಿಕ್ಕೆ ಚಮಚಾ ತರಬೇಕು. ಇದಲ್ಲದೆ ಬಾಧಿತ ಹಳ್ಳಗಳ ರೈತರು ಡೊಳ್ಳು, ಹಲಗೆ, ಶಂಖ, ಜಾಗಟೆ, ಮದ್ದಳೆ, ಕಹಳೆ ಮುಂತಾದ ವಾದ್ಯಗಳನ್ನು ತರಬೇಕು. ಆ ದಿನ ಧರಣಿ ಸ್ಥಳದಿಂದ ಹಳೆ ಜಿಲ್ಲಾ ಪಂಚಾಯತ ಆವರಣದ ರೈತ ಸಂಪರ್ಕ ಕೇಂದ್ರದ ವರೆಗೆ ಸಪ್ಪಳ ಮೆರವಣಿಗೆ ನಡೆಸಲಾಗುವುದು. ತಪ್ಪದೆ ಸ್ವಯಂಪ್ರೇರಿತವಾಗಿ ನಗರದ ನಾಗರಿಕರು ಮತ್ತು ಬಾಧಿತ ಹಳ್ಳಿಯ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಿ ಹೋರಾಟ ಯಶಸ್ವಿಗೋಳಿಸಬೇಕು. ಆ ದಿನ ರಾಯಚೂರು ಏಮ್ಸ್ ಹೋರಾಟದ ಮುಂಚೂಣಿ ನಾಯಕರಾದ ಬಸವರಾಜ ಕಳಸ ಅವರು ಬಹಿರಂಗ ಸಭೆಯಲ್ಲಿ ಬೆಂಬಲಿಸಿ ಮಾತನಾಡುತ್ತಾರೆ ಎಂದರು.
ಸಭೆಯಲ್ಲಿ ಮಾನವ ಬಂಧುತ್ವ ವೆದಿಕೆಯ ರಾಜ್ಯ ಮುಖಂಡ ಟಿ. ರತ್ನಾಕರ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಪ್ರಕಾಶಕ ಡಿ.ಎಂ.ಬಡಿಗೇರ್, ರಾಜ್ಯ ರೈತ ಸಂಘದ ಬಸವರಾಜ ಹೂಗಾರ ಸಿಂಧೋಗಿ, ಗವಿಸಿದ್ದರೆಡ್ಡಿ ಹಾಲವರ್ತಿ, ಮಾರ್ಕಾಂಡೆಯ್ಯ ಹಿರೇಮಠ ಹಾಲವರ್ತಿ, ಮಹಾಂತೇಶ ಕೊತಬಾಳ, ಚಾರಣ ಬಳಗದ ಸಿ.ಬಿ.ಪಾಟೀಲ್, ಸರೋಜಾ ಬಾಕಳೆ, ಮೂಕಪ್ಪ ಮೇಸ್ತ್ರಿ ಬಸಾಪುರ, ಶಂಭುಲಿಂಗಪ್ಪ ಹರಗೇರಿ, ರಾಜಶೇಖರ ಏಳುಭಾವಿ, ಚೆನ್ನವೀರಯ್ಯ ಹಿರೇಮಠ ಕುಣಿಕೇರಿ, ಶರಣಪ್ಪ ಸೋಂಪೂರ ಭಾಗ್ಯನಗರ, ಮಖ್ಬುಲ್ ರಾಯಚೂರು, ಶಿವಪ್ಪ ಜಲ್ಲಿ, ಶಿವಪ್ಪ ಹಲಗೇರಿ, ಇನ್ನು ಅನೇಕರು ಪಾಲ್ಗೊಂಡರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್