ಸಾಕು ಬೆಕ್ಕಿನಿಂದ ತಪ್ಪಿದ ಭಾರಿ ದುರಂತ ; ಕ್ಷಣಾರ್ಧದಲ್ಲಿ ಕುಸಿದ ಮನೆ ಮೇಲ್ಛಾವಣಿ, ತಂದೆ-ಮಗನಿಗೆ ಮರುಜನ್ಮ
ಬಾಗಲಕೋಟೆ, 07 ಜೂನ್ (ಹಿ.ಸ.) : ಆಂಕರ್ : ಮುಂಗಾರು ಮಳೆ ಕೊರತೆಯಿಂದ ರೈತರು ಆತಂಕದಲ್ಲಿರುವ ನಡುವೆಯೇ, ಬಾಗಲಕೋಟೆಯಲ್ಲಿ ಸುರಿದ ಧಾರಾಕಾರ ಮಳೆ ಪವಾಡಸದೃಶ ಘಟನೆಯೊಂದಕ್ಕೆ ಕಾರಣವಾಗಿದೆ. ನಗರದ ವಲ್ಲಭಭಾಯಿ ನಗರದಲ್ಲಿ ಭಾರಿ ಮಳೆಯಿಂದ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದಿದ್ದರೂ, ಸಾಕು ಬೆಕ್ಕಿನ ಕಾರಣದಿಂದ
ಬೆಕ್ಕು


ಬಾಗಲಕೋಟೆ, 07 ಜೂನ್ (ಹಿ.ಸ.) :

ಆಂಕರ್ : ಮುಂಗಾರು ಮಳೆ ಕೊರತೆಯಿಂದ ರೈತರು ಆತಂಕದಲ್ಲಿರುವ ನಡುವೆಯೇ, ಬಾಗಲಕೋಟೆಯಲ್ಲಿ ಸುರಿದ ಧಾರಾಕಾರ ಮಳೆ ಪವಾಡಸದೃಶ ಘಟನೆಯೊಂದಕ್ಕೆ ಕಾರಣವಾಗಿದೆ. ನಗರದ ವಲ್ಲಭಭಾಯಿ ನಗರದಲ್ಲಿ ಭಾರಿ ಮಳೆಯಿಂದ ಮನೆಯ ಮೇಲ್ಛಾವಣಿ ಸಂಪೂರ್ಣ ಕುಸಿದಿದ್ದರೂ, ಸಾಕು ಬೆಕ್ಕಿನ ಕಾರಣದಿಂದ ತಂದೆ ಮತ್ತು ಮಗ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಎಲ್ಲರ ಗಮನ ಸೆಳೆದಿದೆ.

ಹಣ್ಣಿನ ವ್ಯಾಪಾರ ನಡೆಸುತ್ತಿರುವ ಶಬ್ಬೀರ್ ಬಾಗವಾನ್ ಹಾಗೂ ಅವರ ಪುತ್ರ ಆರ್ಬಾಜ್ ಬಾಗವಾನ್ ಮನೆಯಲ್ಲಿ ಇದ್ದ ವೇಳೆ ಮಳೆಯ ತೀವ್ರತೆಗೆ ಮೇಲ್ಛಾವಣಿಯಿಂದ ಮಣ್ಣಿನ ತುಕಡಿಗಳು ಉದುರಲು ಆರಂಭಿಸಿವೆ. ಇದೇ ಸಂದರ್ಭದಲ್ಲಿ ಮನೆಯ ಸಾಕು ಬೆಕ್ಕು ಆತಂಕಗೊಂಡು ಹೊರಗೆ ಓಡಿದೆ. ಹಸಿವಿನಿಂದ ಬಳಲುತ್ತಿದ್ದ ಬೆಕ್ಕಿಗೆ ಆಹಾರ ನೀಡಬೇಕೆಂಬ ಉದ್ದೇಶದಿಂದ ಶಬ್ಬೀರ್ ಅದರ ಹಿಂದೆ ಹೊರಗೆ ಧಾವಿಸಿದ್ದಾರೆ. ತಂದೆಯನ್ನು ಅನುಸರಿಸಿ ಆರ್ಬಾಜ್ ಕೂಡ ಮನೆಯಿಂದ ಹೊರಬಂದಿದ್ದಾರೆ.

ಇಬ್ಬರೂ ಮನೆಯ ಹೊಸ್ತಿಲು ದಾಟಿ ಕೆಲವೇ ಕ್ಷಣಗಳಲ್ಲಿ ಇಡೀ ಮನೆಯ ಮೇಲ್ಛಾವಣಿ ಭಾರಿ ಸದ್ದಿನೊಂದಿಗೆ ಕುಸಿದು ಬಿದ್ದಿದೆ. ಅವರು ಮನೆಯಿಂದ ಹೊರಬರದೇ ಇದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಈ ಕುರಿತು ಮಾತನಾಡಿದ ಆರ್ಬಾಜ್, “ಮೇಲ್ಛಾವಣಿಯಿಂದ ಮಣ್ಣು ಬೀಳುತ್ತಿದ್ದಂತೆ ಬೆಕ್ಕು ಹೊರಗೆ ಓಡಿತು. ಅದಕ್ಕೆ ಆಹಾರ ನೀಡಲು ತಂದೆ ಅದರ ಹಿಂದೆ ಹೋದರು. ನಾನು ಕೂಡ ಅವರೊಂದಿಗೆ ಹೊರಬಂದೆ. ನಾವು ಹೊರಬಂದ ತಕ್ಷಣ ಮೇಲ್ಛಾವಣಿ ಕುಸಿದು ಬಿತ್ತು. ನಮ್ಮ ಪ್ರಾಣ ಉಳಿಯಲು ಬೆಕ್ಕೇ ಕಾರಣವಾಗಿದೆ. ಇಲ್ಲದಿದ್ದರೆ ನಾವು ಬದುಕುಳಿಯುತ್ತಿರಲಿಲ್ಲ” ಎಂದು ಭಾವುಕರಾಗಿ ತಿಳಿಸಿದ್ದಾರೆ.

ಘಟನೆಯ ಮತ್ತೊಂದು ವಿಶೇಷವೆಂದರೆ, ಮನೆಯಲ್ಲಿ ನಡೆಯಬೇಕಿದ್ದ ಮದುವೆ ಕಾರ್ಯಕ್ರಮದ ನಿಮಿತ್ತ ಕುಟುಂಬದ ಇತರ ಸದಸ್ಯರು ವಿಜಯಪುರಕ್ಕೆ ತೆರಳಿದ್ದರು. ಹೀಗಾಗಿ ಮನೆಯಲ್ಲಿ ಕೇವಲ ತಂದೆ ಮತ್ತು ಮಗ ಮಾತ್ರ ಇದ್ದರು. ಇದರಿಂದ ಸಂಭವಿಸಬಹುದಾಗಿದ್ದ ಇನ್ನಷ್ಟು ದೊಡ್ಡ ದುರಂತ ತಪ್ಪಿದಂತಾಗಿದೆ.

ಆದರೆ ಪ್ರಾಣಾಪಾಯದಿಂದ ಪಾರಾದ ಸಂತೋಷದ ನಡುವೆಯೇ, ಮಳೆ ವ್ಯಾಪಾರಿ ಕುಟುಂಬಕ್ಕೆ ಭಾರಿ ಆರ್ಥಿಕ ನಷ್ಟ ಉಂಟು ಮಾಡಿದೆ. ಮೇಲ್ಛಾವಣಿ ಕುಸಿದ ಪರಿಣಾಮ ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳು, ದವಸ-ಧಾನ್ಯಗಳು ಹಾಗೂ ವ್ಯಾಪಾರಕ್ಕಾಗಿ ಸಂಗ್ರಹಿಸಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮಾವಿನ ಹಣ್ಣುಗಳು ಸಂಪೂರ್ಣ ಹಾನಿಗೊಳಗಾಗಿವೆ.

ಸದ್ಯ ಸಂಕಷ್ಟಕ್ಕೆ ಸಿಲುಕಿರುವ ಶಬ್ಬೀರ್ ಬಾಗವಾನ್ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ನೆರವು ಒದಗಿಸುವಂತೆ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಈ ಘಟನೆ ಪ್ರಕೃತಿ ವಿಕೋಪದ ನಡುವೆಯೂ ಸಾಕುಪ್ರಾಣಿಯೊಂದು ಎರಡು ಜೀವಗಳನ್ನು ಉಳಿಸಿದ ಅಪರೂಪದ ಉದಾಹರಣೆಯಾಗಿ ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande