ಬಿಡದಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಲು ನಾಳೆ ಯತ್ನಾಳ್ ಭೇಟಿ
ವಿಜಯಪುರ, 07 ಜೂನ್ (ಹಿ.ಸ.) : ಆಂಕರ್ : ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ಬಿಡದಿ ಟೌನ್ಶಿಪ್, AI ಸಿಟಿ ಹಾಗೂ ಸ್ಯಾಟಲೈಟ್ ಸಿಟಿ ಯೋಜನೆಗಳ ವಿರುದ್ಧ ಕಳೆದ 450 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ರೈತರನ್ನು ಭೇಟಿ ಮಾಡಿ ಅವರಿಗೆ ಬೆಂಬಲ ಸೂಚಿಸುವುದಾಗಿ ಪತ್ರಿಕಾ ಪ್ರಕಟಣೆ ಮೂಲಕ ವಿಜಯಪುರ ಶಾಸಕ ಬ
ಹೊರಟ


ವಿಜಯಪುರ, 07 ಜೂನ್ (ಹಿ.ಸ.) :

ಆಂಕರ್ : ರಾಜ್ಯ ಸರ್ಕಾರ ಪ್ರಸ್ತಾಪಿಸಿರುವ ಬಿಡದಿ ಟೌನ್ಶಿಪ್, AI ಸಿಟಿ ಹಾಗೂ ಸ್ಯಾಟಲೈಟ್ ಸಿಟಿ ಯೋಜನೆಗಳ ವಿರುದ್ಧ ಕಳೆದ 450 ದಿನಗಳಿಂದ ನಿರಂತರ ಹೋರಾಟ ನಡೆಸುತ್ತಿರುವ ರೈತರನ್ನು ಭೇಟಿ ಮಾಡಿ ಅವರಿಗೆ ಬೆಂಬಲ ಸೂಚಿಸುವುದಾಗಿ ಪತ್ರಿಕಾ ಪ್ರಕಟಣೆ ಮೂಲಕ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಘೋಷಿಸಿದ್ದಾರೆ.

ಜೂನ್ 8ರಂದು ಬಿಡದಿಗೆ ಭೇಟಿ ನೀಡಿ ಪ್ರತಿಭಟನಾ ನಿರತ ರೈತರೊಂದಿಗೆ ಚರ್ಚೆ ನಡೆಸಲಿದ್ದು, ಅವರ ನ್ಯಾಯಯುತ ಹೋರಾಟಕ್ಕೆ ಬೇಷರತ್ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದ್ದಾರೆ.

ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಬೈರಮಂಗಲ ಹಾಗೂ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಸುಮಾರು 25 ಹಳ್ಳಿಗಳ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು AI ಸಿಟಿ ಮತ್ತು ಸ್ಯಾಟಲೈಟ್ ಸಿಟಿ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿರುವುದನ್ನು ಅವರು ತೀವ್ರವಾಗಿ ವಿರೋಧಿಸಿದ್ದಾರೆ.

ಈ ಪ್ರದೇಶದಲ್ಲಿ ರೈತರು ತೆಂಗು, ಅಡಿಕೆ, ಬಾಳೆ, ಮಾವು, ಸಪೋಟ, ಹಲಸು ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳನ್ನು ಬೆಳೆಯುವುದರ ಜೊತೆಗೆ ತರಕಾರಿ ಕೃಷಿ, ರೇಷ್ಮೆ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.

ಇಂತಹ ಸಮೃದ್ಧ ಕೃಷಿ ಪ್ರದೇಶವನ್ನು ನಗರೀಕರಣದ ಹೆಸರಿನಲ್ಲಿ ಸ್ವಾಧೀನಪಡಿಸಿಕೊಳ್ಳುವ ನಿರ್ಧಾರ ರೈತ ವಿರೋಧಿ ಮತ್ತು ಅತಾರ್ಕಿಕ ಕ್ರಮವಾಗಿದೆ ಎಂದು ಆರೋಪಿಸಲಾಗಿದೆ.

ರಾಜ್ಯದ ಅಭಿವೃದ್ಧಿ ಹೆಸರಿನಲ್ಲಿ ರೈತರ ಬದುಕಿನ ಮೇಲೆ ಗದಾಪ್ರಹಾರ ನಡೆಸುವುದು ಸರಿಯಲ್ಲ. AI ಸಿಟಿ ಮತ್ತು ಸ್ಯಾಟಲೈಟ್ ಸಿಟಿ ನಿರ್ಮಾಣಕ್ಕೆ ಬೇರೆ ಪರ್ಯಾಯ ಭೂಮಿಯನ್ನು ಹುಡುಕಬಹುದಾಗಿದ್ದರೂ, ಫಲವತ್ತಾದ ಕೃಷಿ ಭೂಮಿಯನ್ನೇ ಗುರಿಯಾಗಿಸಿಕೊಂಡಿರುವುದು ಅನುಮಾನಗಳಿಗೆ ಕಾರಣವಾಗಿದೆ. ಸರ್ಕಾರ ರಿಯಲ್ ಎಸ್ಟೇಟ್ ಲಾಬಿಯ ಒತ್ತಡಕ್ಕೆ ಮಣಿದು ರೈತರ ಹಿತಾಸಕ್ತಿಯನ್ನು ಕಡೆಗಣಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟಕ್ಕೆ ಸರ್ಕಾರ ಸ್ಪಂದಿಸದಿರುವುದು ವಿಷಾದನೀಯ ಸಂಗತಿ ಎಂದು ಹೇಳಿರುವ ಅವರು, ರೈತರ ಅಹವಾಲುಗಳನ್ನು ಆಲಿಸಿ ಅವರ ನ್ಯಾಯಸಮ್ಮತ ಬೇಡಿಕೆಗಳಿಗೆ ಬೆಂಬಲ ನೀಡುವ ಉದ್ದೇಶದಿಂದ ಬಿಡದಿಗೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟವನ್ನು ಮತ್ತಷ್ಟು ಬಲಪಡಿಸಬೇಕೆಂದು ಕರೆ ನೀಡಲಾಗಿದೆ.

ಅನ್ನದಾತನ ರಕ್ಷಣೆ ನಮ್ಮೆಲ್ಲರ ಹೊಣೆ. ರೈತರ ಭೂಮಿ ಮತ್ತು ಬದುಕಿನ ರಕ್ಷಣೆಗೆ ಎಲ್ಲರೂ ಒಂದಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande